ಹೈದರಾಬಾದ್: ದ್ವೇಷಪೂರಿತ ಭಾಷಣ ಪ್ರಕರಣದಲ್ಲಿ ಎಐಎಂಎಂ ನಾಯಕ ಅಕ್ಬರುದ್ದೀನ್ ಓವೈಸಿ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ 2012ರ ಡಿಸೆಂಬರ್ನಲ್ಲಿ ನಿರ್ಮಲ್ ಮತ್ತು ನಿಜಾಮಾಬಾದ್ ಜಿಲ್ಲೆಯಲ್ಲಿ ಅಕ್ಬರುದ್ದೀನ್ ಓವೈಸಿ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿತ್ತು. ವಾದ, ಪ್ರತಿವಾದ ಆಲಿಸಿದ್ದ ಕೋರ್ಟ್ ಇಂದು ತೀರ್ಪು ನೀಡುವುದಾಗಿ ಪ್ರಕಟಿಸಿತ್ತು.

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಕಿರಿಯ ಸಹೋದರ ಅಕ್ಬರುದ್ದೀನ್ ಓವೈಸಿ ವಿರುದ್ಧ ಒಂದು ಧರ್ಮದ ವಿರುದ್ಧ ಮಾತನಾಡಿದ್ದಕ್ಕೆ ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳು ದಾಖಲಾಗಿತ್ತು.
ಕೇಸ್ ದಾಖಲಾದ ಬಳಿಕ ಬಂಧನಕ್ಕೆ ಒಳಗಾಗಿದ್ದ ಅಕ್ಬರುದ್ದೀನ್ ಓವೈಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕೆಜಿಎಫ್ 2 ರಿಲೀಸ್ ಇಲ್ಲ: ಅಭಿಮಾನಿಗಳ ಪ್ರತಿಭಟನೆ, ಸಿ.ಟಿ ರವಿ ಭರವಸೆ
ಸಿಐಡಿ ಪೊಲೀಸರು 2016ರಲ್ಲಿ ನಿಜಾಮಾಬಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಸಿದ್ದರೆ ಅದೇ ವರ್ಷ ನಿರ್ಮಲ್ ಜಿಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದರು. ನಿಜಾಮಾಬಾದ್ ಪ್ರಕರಣದಲ್ಲಿ ಒಟ್ಟು 41 ಸಾಕ್ಷಿಗಳು, ನಿರ್ಮಲ್ ಪ್ರಕರಣದಲ್ಲಿ 33 ಜನರನ್ನು ವಿಚಾರಣೆ ನಡೆಸಲಾಗಿತ್ತು.

Leave a Reply