ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

ನವದೆಹಲಿ: ದೇಶದೆಲ್ಲೆಡೆ ಓದುತ್ತಿರುವ ಮತ್ತು ಮುಂದೆ ಓದಲಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಈ ಶೈಕ್ಷಣಿಕ ವರ್ಷದಿಂದ ನೀವು ಅರ್ಧದಲ್ಲೇ ಕಾಲೇಜನ್ನು ಬಿಟ್ಟರೂ ಶುಲ್ಕ ಮರುಪಾವತಿಯಾಗಲಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಎಲ್ಲಾ ಕಾಲೇಜುಗಳಿಗೆ ಈ ಶುಲ್ಕವನ್ನು ಮರು ಪಾವತಿಸುವಂತೆ ನಿರ್ದೇಶನ ನೀಡಿದೆ. ಶುಲ್ಕ ಮರುಪಾವತಿಯ ಜೊತೆಗೆ ಕಾಲೇಜುಗಳು ವಿದ್ಯಾರ್ಥಿ ಪ್ರವೇಶಾತಿ ಸಂದರ್ಭದಲ್ಲಿ ನೀಡಿರುವ ಎಲ್ಲ ದಾಖಲೆಗಳನ್ನು 7 ದಿನದ ಒಳಗಡೆ ಹಿಂದಿರುಗಿಸಲು ಸೂಚಿಸಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

2017- 18ರ ಎಐಸಿಟಿಇಯ ಕೈಪಿಡಿ ಪ್ರಕಟವಾಗಿದೆ. ಈ ಕೈಪಿಡಿಯಲ್ಲಿ ಕೋರ್ಸ್ ಆರಂಭವಾಗುವ ಮುನ್ನವೇ ಕಾಲೇಜನ್ನು ಬಿಟ್ಟರೆ ಪ್ರವೇಶಾತಿ ಪ್ರಕ್ರಿಯೆಗಳಿಗೆ 1 ಸಾವಿರ ರೂ. ಶುಲ್ಕಗಳನ್ನು ತೆಗೆದುಕೊಂಡು ಉಳಿದ ಎಲ್ಲ ಶುಲ್ಕಗಳನ್ನು ಮರು ಪಾವತಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಒಂದು ವೇಳೆ ತರಗತಿ ಆರಂಭಗೊಂಡು ಅರ್ಧದಿಂದ ವಿದ್ಯಾರ್ಥಿ ಕೈಬಿಟ್ಟರೆ ಅದುವರೆಗಿನ ಅವಧಿಯ ಶುಲ್ಕವನ್ನು ಮತ್ತು ಹಾಸ್ಟೆಲ್ ಶುಲ್ಕವನ್ನು ತೆಗೆದುಕೊಂಡು ಉಳಿದ ಶುಲ್ಕವನ್ನು ವಾಪಸ್ ಮಾಡಬೇಕೆಂದು ಸೂಚಿಸಿದೆ.

ಅರ್ಧದಲ್ಲೇ ಕೈ ಬಿಟ್ಟ ವಿದ್ಯಾರ್ಥಿಗಳ ದಾಖಲೆಗಳನ್ನು ಕಾಲೇಜಿನಲ್ಲೇ ಇಟ್ಟುಕೊಳ್ಳುವುದನ್ನು ಎಐಸಿಟಿಇ ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಇದನ್ನೂ ಓದಿ: 6 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ತೆಗೆಯಲಿದೆ ಕಾಗ್ನಿಜೆಂಟ್!

ಒಂದು ವೇಳೆ ಈ ನಿರ್ದೇಶನವನ್ನು ಕಾಲೇಜುಗಳು ಉಲ್ಲಂಘಿಸಿದಲ್ಲಿ ಕಾಲೇಜುಗಳ ಮೇಲೆ ಎಐಸಿಟಿಇ ಕಠಿಣ ಕ್ರಮವನ್ನು ಕೈಗೊಳ್ಳಲಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾದರೆ ಕೊಡಬೇಕಾಗಿರುವ ಶುಲ್ಕದ ದುಪ್ಪಟ್ಟು ಹಣವನ್ನು ವಿದ್ಯಾರ್ಥಿಗೆ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಕಾಲೇಜಿನ ಕೋರ್ಸ್‍ಗಳಿಗೆ ಮಂಜೂರು ಮಾಡಿದ ಅನುಮೋದನೆಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಎಐಸಿಟಿಇ ತನ್ನ ಹ್ಯಾಂಡ್ ಬುಕ್‍ನಲ್ಲಿ ಹೇಳಿದೆ.

ಮಾನವ ಸಂಪನ್ಮೂಲ ಸಚಿವಾಲಯಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಸಾಕಷ್ಟು ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಎಐಸಿಟಿಇ ಈ ಕ್ರಮವನ್ನು ಕೈಗೊಂಡಿದೆ. ದೇಶದಲ್ಲಿ 3 ಸಾವಿರಕ್ಕೂ ಅಧಿಕ ನೊಂದಾಯಿತ ಎಂಜಿನಿಯರಿಂಗ್ ಕಾಲೇಜುಗಳಿದ್ದು ಪ್ರತಿವರ್ಷ 7 ಲಕ್ಷ ಎಂಜಿನಿಯರ್ ಪದವೀಧರರು ಹೊರ ಬರುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಯುಜಿಸಿ ಎಲ್ಲ ಕಾಲೇಜುಗಳಿಗೆ ಪ್ರವೇಶಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಪಡೆದುಕೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಿತ್ತು.

 ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?

Comments

Leave a Reply

Your email address will not be published. Required fields are marked *