ಅಸಮಧಾನಿತರನ್ನ ಸಮಾಧಾನ ಮಾಡೋ ಹೊಣೆ ಖರ್ಗೆಗೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಅಸಮಾಧಾನ ಸರಿಪಡಿಸಲು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂದಾಗಿದ್ದಾರೆ. ಕೈ ಪಾಳಯದ ಆಂತರ್ ಯುದ್ಧಕ್ಕೆ ಅಂತ್ಯ ಹಾಡಲು ಕಾಂಗ್ರೆಸ್ ಹೈಕಮಾಂಡ್ ಖರ್ಗೆ ಅಸ್ತ್ರ ಬಳಸಿದೆ.

ರಾಜ್ಯದ ಆ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ನಿವಾರಣೆಗೆ ಹಿರಿಯ ನಾಯಕನಿಗೆ ಹೈ ಕಮಾಂಡ್ ಸೂಚನೆ ನೀಡಿದ್ದು ಹೈಕಮಾಂಡ್ ಸೂಚನೆ ಮೇರೆಗೆ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಂಧಾನ ನಡೆಸಲಿದ್ದಾರೆ. ಈ ಸಂಧಾನ ಸೂತ್ರ ಯಶಸ್ವಿಯಾದರೆ ಕಗ್ಗಂಟಾದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ನಡೆಯುವ ಸಾಧ್ಯತೆ ಇದೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಟ್ರಬಲ್ ಶೂಟರ್ ಡಿಕೆಶಿ ನಡುವಿನ ಪ್ರತಿಷ್ಟೆಯಿಂದಾಗಿ ಕೆಪಿಸಿಸಿ, ಸಿಎಲ್‍ಪಿ, ವಿಪಕ್ಷ ನಾಯಕನ ಸ್ಥಾನ ಯಾವುದರ ಆಯ್ಕೆಯು ನಡೆಯದೇ ಎಲ್ಲವು ಕಗ್ಗಂಟಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪರಸ್ಪರ ಹಟಕ್ಕೆ ಬಿದ್ದ ಪರಿಣಾಮ ಎಲ್ಲವನ್ನು ತಡೆ ಹಿಡಿಯಲಾಗಿದೆ.

ಡಿಕೆಶಿ ವಿಪಕ್ಷ ಹಾಗೂ ಸಿಎಲ್‍ಪಿ ಎರಡನ್ನು ಬೇರೆ ಬೇರೆ ಮಾಡುವಂತೆ ಹೇಳಿದ್ದಾರೆ ಅನ್ನೋದು ಸಿದ್ದರಾಮಯ್ಯ ಸಿಟ್ಟು. ಕೆಪಿಸಿಸಿಗೆ ನಾಲ್ಕು ಕಾರ್ಯಾಧ್ಯಕ್ಷರ ನೇಮಕಕ್ಕೆ ಸಿದ್ದರಾಮಯ್ಯ ಪಟ್ಟು ಹಿಡಿದಿರುವುದು ಡಿಕೆಶಿ ಸಿಟ್ಟಿನ ಮೂಲ. ಈ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಮನ್ವಯ ಮೂಡಿಸಲು ಹೈ ಕಮಾಂಡ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಸೂಚನೆ ನೀಡಿದೆ.

ಈಗ ಮಲ್ಲಿಕಾರ್ಜುನ ಖರ್ಗೆ ಅಧಿಕೃತವಾಗಿ ಅಖಾಡಕ್ಕೆ ಎಂಟ್ರಿ ಕೊಡಲು ಮುಂದಾಗಿದ್ದಾರೆ. ಖರ್ಗೆ ಅವರ ಎಂಟ್ರಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಮನ್ವಯ ಮೂಡಿಸಿ ಬಿಕ್ಕಟ್ಟು ಬಗೆಹರಿದರೆ ಕೆಪಿಸಿಸಿ, ಸಿಎಲ್‍ಪಿ ಹಾಗೂ ವಿಪಕ್ಷಕ್ಕೆ ನೂತನ ಸಾರಥಿ ನೇಮಕ ಶೀಘ್ರವಾಗಿ ನಡೆಯಲಿದೆ.

Comments

Leave a Reply

Your email address will not be published. Required fields are marked *