ಇಂಜಿನ್ ಇಲ್ಲದೇ 12 ಕಿಮೀ ಚಲಿಸಿದ 22 ಬೋಗಿಯ ಅಹಮದಾಬಾದ್-ಪುರಿ ಎಕ್ಸ್‌ಪ್ರೆಸ್‌

ಭುವನೇಶ್ವರ್: ರೈಲ್ವೇ ನೌಕರರ ನಿರ್ಲಕ್ಷ್ಯದಿಂದಾಗಿ 22 ಬೋಗಿಯುಳ್ಳ ಅಹಮದಾಬಾದ್-ಪುರಿ ಎಕ್ಸ್ ಪ್ರೆಸ್ ರೈಲ್ವೆ ಇಂಜಿನ್ ಇಲ್ಲದೇ ಸುಮಾರು 12 ಕಿ.ಮೀ. ಚಲಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಶನಿವಾರ ರಾತ್ರಿ 10.45 ನಿಮಿಷಕ್ಕೆ ಓರಿಸ್ಸಾ ರಾಜ್ಯದ ಟಿಟಲಗಢ ನಿಲ್ದಾಣಕ್ಕೆ ಅಹಮದಾಬಾದ್-ಪುರಿ ಎಕ್ಸ್‌ಪ್ರೆಸ್‌ ಬಂದು ನಿಂತಿದೆ. ಈ ವೇಳೆ ರೈಲ್ವೆಯ ಇಂಜಿನ್ ಬದಲಾವಣೆ ಮಾಡಲಾಗುತ್ತಿತ್ತು. ಇಂಜಿನ್ ರೈಲಿನಿಂದ ಬೇರೆಯಾಗುತ್ತಿದ್ದಂತೆ ಚಲಿಸಲಾರಂಭಿಸಿದೆ. ನೋಡ ನೋಡುತ್ತಿದ್ದಂತೆ ರೈಲಿನ ವೇಗ ಹೆಚ್ಚಾಗಿದ್ದು, ನಿಲ್ದಾಣದಿಂದ ಬೋಗಿಗಳು ಚಲಿಸಿವೆ. ಬರೋಬ್ಬರಿ 12.35 ಕಿ.ಮೀ ಚಲಿಸಿದ ನಂತರ ಕೇಸಿಂಗ್ ಸ್ಟೇಶನ್ ನಲ್ಲಿ ಎಲ್ಲ ಬೋಗಿಗಳನ್ನು ನಿಲ್ಲಿಸಲಾಗಿದೆ.

ಇಂಜಿನ್ ಇಲ್ಲದೇ ರೈಲು ಚಲಿಸುತ್ತಿರುವಾಗ ಎದುರಿನಿಂದ ಯಾವುದೇ ರೈಲುಗಳು ಬಂದಿಲ್ಲ. ಹೀಗಾಗಿ ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕೇಸಿಂಗ್ ಸ್ಟೇಶನ್ ನಲ್ಲಿ ನಿಂತ ರೈಲಿಗೆ ಇಂಜಿನ್ ಜೋಡಿಸಿ ರಿವರ್ಸ್ ಟಿಟಲಗಢ ನಿಲ್ದಾಣಕ್ಕೆ ತಂದು ನಿಲ್ಲಿಸಲಾಗಿದೆ. ರೈಲು ಇಂಜಿನ್ ಇಲ್ಲದೇ ಚಲಿಸುವುದನ್ನು ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಇಂಜಿನ್ ಬೇರ್ಪಡೆ ಹೇಗೆ ಆಗುತ್ತೆ: ನಿಲ್ದಾಣದಲ್ಲಿ ಇಂಜಿನ್ ಬೇರ್ಪಡೆ ಮಾಡುವ ಮುಂಚೆ ಬೋಗಿಯ ಗಾಲಿಗಳು ಚಲಿಸದಂತೆ ಸ್ಕಿಡ್ ಇರಿಸಲಾಗುತ್ತದೆ. ಇಂಜಿನ್ ಬೇರ್ಪಡೆಯಾಗುತ್ತಿದ್ದಂತೆ ಹಿಮ್ಮುಖ ಒತ್ತಡದಿಂದಾಗಿ ಬೋಗಿಗಳ ಚಕ್ರಗಳಲ್ಲಿ ಚಲನ ಶಕ್ತಿ ಉಂಟಾಗುತ್ತದೆ. ಹೀಗಾಗಿಯೇ ಬೋಗಿಗಳ ಚಕ್ರಕ್ಕೆ ಕಬ್ಬಿಣದ ಸ್ಕಿಡ್ ಇರಿಸಲಾಗುತ್ತದೆ. ಅಹಮದಾಬಾದ್-ಪುರಿ ಎಕ್ಸ್ ಪ್ರೆಸ್ ರೈಲಿನ ಇಂಜಿನ್ ಬೇರ್ಪಡಿಸುವಾಗ ಸ್ಕಿಡ್ ಇಡಲಾಗಿತ್ತೋ ಅಥವಾ ಸರಿಯಾಗಿ ಇರಿಸಿಲ್ಲವೋ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಇದು ರೈಲ್ವೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನಡೆದಂತಹ ಘಟನೆ. ಒಂದು ವೇಳೆ ಇಂಜಿನ್ ಇಲ್ಲದೇ ಬೋಗಿಗಳು ಚಲಿಸುತ್ತಿರುವಾಗ ವಿರುದ್ಧ ದಿಕ್ಕಿನಲ್ಲಿ ರೈಲು ಬಂದಿದ್ದರೆ ದೊಡ್ಡ ಅಪಘಾತವಾಗುವ ಸಾಧ್ಯತೆಗಳಿದ್ದವು ಅಂತಾ ಪ್ರಯಾಣಿಕ ಮುಖೇಶ್ ಶರ್ಮಾ ಹೇಳಿದ್ದಾರೆ.

ಘಟನೆಯ ಬಳಿಕ ತನಿಖೆ ನಡೆಸಲು ಆದೇಶಿಸಲಾಗಿದೆ. ಈ ಸಂಬಂಧ ಇಬ್ಬರು ಲೋಕೋಪೈಲಟ್, ಮೂವರು ಕ್ಯಾರೇಜ್ ದುರಸ್ತಿ ಸಿಬ್ಬಂದಿ ಮತ್ತು ಇಬ್ಬರು ಡಿ ಗ್ರೂಪ್ ನೌಕರರನ್ನು ಅಮಾನತು ಮಾಡಲಾಗಿದೆ ಎಂದು ಈಸ್ಟ್ ಕೋಸ್ಟ್ ರೈಲ್ವೇ ಜನರಲ್ ಮ್ಯಾನೇಜರ್ ಉಮೇಶ್ ಸಿಂಗ್ ತಿಳಿಸಿದ್ದಾರೆ.

https://youtu.be/pK1wX3AasRo

Comments

Leave a Reply

Your email address will not be published. Required fields are marked *