ಹಿಂದೂ ಯುವತಿಯೊಂದಿಗೆ ಪರಾರಿಯಾದ ಮುಸ್ಲಿಂ ಯುವಕನ ಮನೆಗೆ ಬೆಂಕಿ

ಲಕ್ನೋ: ಹಿಂದೂ ಯುವತಿಯೊಂದಿಗೆ ಪರಾರಿಯಾದ ಮುಸ್ಲಿಂ ಯುವಕನ ಕುಟುಂಬಕ್ಕೆ ಸೇರಿದ ಎರಡು ಮನೆಗಳಿಗೆ ಗುಂಪೊಂದು ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ನಡೆದಿದೆ.

ಆಗ್ರಾದ ರುನಕ್ತಾ ಪ್ರದೇಶದಲ್ಲಿ ಜಿಮ್ ಮಾಲೀಕ ಸಾಜಿದ್ ಅವರ ಮನೆಗೆ ಧರಮ್ ಜಾಗರಣ ಸಮನ್ವಯ್ ಸಂಘದ  ಸದಸ್ಯರು ಬೆಂಕಿ ಹಚ್ಚಿದ್ದಾರೆ ಮತ್ತು ಕುಟುಂಬಕ್ಕೆ ಸೇರಿದ ಪಕ್ಕದ ಮನೆಗೂ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯನ್ನು ಯುವಕ ಅಪಹರಿಸಿದ್ದು, ಆರೋಪಿಯನ್ನು ಬಂಧಿಸುವಂತೆ ಗುಂಪಿನ ಸದಸ್ಯರು ಒತ್ತಾಯಿಸಿದ್ದು, ಅವರ ಬೇಡಿಕೆಯ ಮೇರೆಗೆ ಸ್ಥಳೀಯ ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ಶುಕ್ರವಾರ ಮುಚ್ಚಲಾಯಿತು. ಅದೃಷ್ಟವಶಾತ್ ಘಟನೆ ವೇಳೆ ಯಾರಿಗೂ ಯಾವುದೇ ಸಮಸ್ಯೆಗಳಾಗಿಲ್ಲ.

ಘಟನೆ ನಂತರ ನಿರ್ಲಕ್ಷ್ಯ ವಹಿಸಿದ್ದ ಪೊಲೀಸ್ ಪೋಸ್ಟ್ ಇನ್ ಚಾರ್ಜ್ ಅನ್ನು ಅಮಾನತುಗೊಳಿಸಲಾಗಿದ್ದು, ಸಿಕಂದರಾ ಠಾಣಾಧಿಕಾರಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಒಂದು ವೇಳೆ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಆಗ್ರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರಿಯರಿಗೆ ವಿಶೇಷ ಸಂದೇಶ ಕೊಟ್ಟ ಭಾರತೀಯ ಸೇನೆ

ಸೋಮವಾರ ಯುವತಿ ನಾಪತ್ತೆಯಾಗಿದ್ದು, ಎರಡು ದಿನಗಳ ನಂತರ ಆಕೆಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆದರೆ ಸಾಜಿದ್ ಎಲ್ಲಿದ್ದಾನೆ ಎಂಬುದು ಇನ್ನೂ ತಿಳಿದಿಲ್ಲ. ಆಕೆಯ ಕುಟುಂಬ ಸದಸ್ಯರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದು, ಪೊಲೀಸರು ದಂಪತಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವಿಚಾರವಾಗಿ ಯುವತಿ ಮಾತನಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ತಾನು ವಯಸ್ಕಳಾಗಿದ್ದು, ಯುವಕನೊಂದಿಗೆ ಸ್ವಇಚ್ಛೆಯಿಂದ ಹೋಗಿದ್ದೇನೆ ಎಂದು ತಿಳಿಸಿದ್ದಾರೆ.

ಇದೀಗ ಮನೆಗಳಿಗೆ ಬೆಂಕಿ ಹಚ್ಚಿದ ಗುಂಪಿನ ಸದಸ್ಯರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಯುವತಿ ಮನೆಯವರು ಮತ್ತು ಜಿಮ್ ಮಾಲೀಕರ ವಿರುದ್ಧ ಕೂಡ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *