ಗದಗದಲ್ಲಿ ಮತ್ತೆ ಭೂಕುಸಿತ – ಮನೆಯೊಳಗೆ ಬಿತ್ತು ಬೃಹತ್ ಹೊಂಡ

ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತವಾಗಿದ್ದು, ಮನೆಯೊಂದರಲ್ಲಿ ಬಿದ್ದ ಬೃಹತ್ ಹೊಂಡವನ್ನು ನೋಡಿ ಜನರು ಆತಂಕಕ್ಕೀಡಾಗಿದ್ದಾರೆ.

ನರಗುಂದ ಪಟ್ಟಣದ ಕಸಬಾ ಕಾಲೋನಿಯಲ್ಲಿ ಪದೇ ಪದೇ ಭೂಮಿ ಕುಸಿಯುತ್ತಿದ್ದು, ಜನರಲ್ಲಿ ದಿನೇ ದಿನೇ ಆತಂಕ ಹೆಚ್ಚಾಗುತ್ತಿದೆ. ಕಸಬಾ ಕಾಲೋನಿಯ ನಿವಾಸಿ ನಬೀಸಾಬ್ ಮೊಕಾಶಿ ಅವರ ಮನೆಯಲ್ಲಿ ಭೂಮಿ ಕುಸಿತವಾಗಿದ್ದು, ಮನೆಯ ಸದಸ್ಯರು ತಕ್ಷಣ ಮನೆಬಿಟ್ಟು ಓಡಿಬಂದಿದ್ದಾರೆ. ಒಂದೇ ತಿಂಗಳಲ್ಲಿ ಹತ್ತಾರು ಬಾರಿ ಭೂಮಿ ಏಕಾಏಕಿ ಕುಸಿದ ಘಟನೆ ನಡೆದಿದ್ದು ಜನರು ಕಂಗಾಲಾಗಿದ್ದಾರೆ.

ಸಚಿವ ಸಿ.ಸಿ ಪಾಟೀಲ್ ಕ್ಷೇತ್ರದಲ್ಲೇ ಪದೇ ಪದೇ ಭೂಮಿ ಕುಸಿಯುತ್ತಿದೆ. ಇದರಿಂದ ಮನೆಯ ಗೋಡೆಗಳು ಬಿರುಕುಗೊಳ್ಳುತ್ತಿವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದು, ನಿಖರ ಕಾರಣ ತಿಳಿದು ಬಾರದ ಹಿನ್ನೆಲೆಯಲ್ಲಿ ನರಗುಂದ ಜನರು ಭಯ, ಆತಂಕದೊಂದಿಗೆ ದಿನ ಕಳೆಯುತ್ತಿದ್ದಾರೆ.

ಈ ಹಿಂದೆ ಕೂಡ ಕಸಬಾ ಓಣಿಯಲ್ಲಿಯೇ ಭೂಕುಸಿತ ಸಂಭವಿಸಿತ್ತು. ಇಲ್ಲಿಯ ನಿವಾಸಿ ಮಹಾಂತೇಶಗೌಡ, ಪ್ರಭುಗೌಡ ಅವರ ಮನೆ ಮುಂಭಾಗದಲ್ಲಿ ಭೂಮಿ ಕುಸಿದಿತ್ತು. ಪರಿಣಾಮ ಆ ಸ್ಥಳದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮಣ್ಣಿನಡಿ ಸಿಲುಕಿಕೊಂಡಿತ್ತು. ಈ ವೇಳೆ ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಆಳಕ್ಕೆ ಇಳಿಯುತ್ತಿದ್ದ ಟ್ರ್ಯಾಕ್ಟರ್‌ನನ್ನು ಜೆಸಿಬಿ ಸಹಾಯದಿಂದ ಮೇಲಕ್ಕೆ ಎತ್ತಿದ್ದರು.

ಅಷ್ಟೇ ಅಲ್ಲದೆ ಅಕ್ಟೋಬರ್‌ನಲ್ಲಿ ಇದೇ ಓಣಿಯ ನಿವಾಸಿ ರತ್ನಾಕರ ದೇಶಪಾಂಡೆ ಅವರ ಮನೆ ಹಿಂಭಾಗದಲ್ಲಿ ಭೂಮಿ ಕುಸಿದಿತ್ತು. ಆಗ ಗುಂಡಿಯಲ್ಲಿ ರತ್ನಾಕರ ಅವರು ಸಿಲುಕಿಕೊಂಡಿದ್ದರು. ರತ್ನಾಕರ ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಹೂ ಕಿತ್ತು ತರುವ ವೇಳೆ ದಿಢೀರ್ ಭೂ ಕುಸಿತವಾಗಿತ್ತು. ಪರಿಣಾಮ ರತ್ನಾಕರ ಅವರು ಸುಮಾರು 10 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದರು. ಅವರ ನರಳಾಟ, ಕೂಗಾಟ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಬಂದು ರಕ್ಷಣೆ ಮಾಡಿದ್ದರು.

Comments

Leave a Reply

Your email address will not be published. Required fields are marked *