ಹಜ್ ಸಬ್ಸಿಡಿ ರದ್ದುಗೊಳಿಸಿದ ಬೆನ್ನಲ್ಲೇ ಕ್ರೈಸ್ತರನ್ನ ಉಚಿತವಾಗಿ ಜೆರುಸಲೇಂ ಗೆ ಕಳಿಸಲು ಮುಂದಾದ ಬಿಜೆಪಿ

ನವದೆಹಲಿ: ಸುಮಾರು ಒಂದು ತಿಂಗಳ ಹಿಂದಷ್ಟೇ ಹಜ್ ಯಾತ್ರಿಗಳಿಗೆ ಸರ್ಕಾರದ ಸಬ್ಸಿಡಿಯನ್ನ ರದ್ದು ಮಾಡಿದ ಬಿಜೆಪಿ ಇದೀಗ ಕ್ರೈಸ್ತರನ್ನ ಉಚಿತವಾಗಿ ಜೆರುಸಲೇಂಗೆ ಕಳಿಸೋದಾಗಿ ಹೇಳಿದೆ.

ನಾಗಾಲ್ಯಾಂಡ್‍ನಲ್ಲಿ ಅಧಿಕಾರಕ್ಕೆ ಬಂದರೆ ಕ್ರೈಸ್ತರನ್ನ ಉಚಿತವಾಗಿ ಜೆರುಸಲೇಂಗೆ ಕಳಿಸುವುದಾಗಿ ಬಿಜೆಪಿ ಹೇಳಿದೆ. ಆದ್ರೆ ಎಲ್ಲಾ ಭಾರತೀಯ ಕ್ರೈಸ್ತರಿಗೆ ಈ ಆಫರ್ ನೀಡಿತ್ತಿದೆಯೋ ಅಥವಾ ಇದು ಈಶಾನ್ಯದಲ್ಲಿರುವ ಕ್ರೈಸ್ತರಿಗೋ ಅಥವಾ ನಾಗಾಲ್ಯಾಂಡಿನಲ್ಲಿರುವ ಕ್ರೈಸ್ತರಿಗೆ ಮಾತ್ರವೋ ಎಂಬುದು ಸ್ಪಷ್ಟವಾಗಿಲ್ಲ. ಮೂರು ಈಶಾನ್ಯ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್ ಹಾಗೂ ತ್ರಿಪುರಾದಲ್ಲಿ ಚುನಾವಣೆಗೆ ತಯಾರಿ ನಡೆಸುತ್ತಿರುವ ಹೊತ್ತಲ್ಲೇ ಬಿಜೆಪಿ ಈ ಆಫರ್ ನೀಡಿದೆ. ಮೇಘಾಲಯದಲ್ಲಿ 75% ಜನಸಂಖ್ಯೆ ಕ್ರೈಸ್ತರಾಗಿದ್ದಾರೆ. ಹಾಗೇ ನಾಗಾಲ್ಯಾಂಡ್‍ನಲ್ಲಿ 88% ಜನಸಂಖ್ಯೆ ಕ್ರೈಸ್ತರಾಗಿದ್ದಾರೆ.

ವೀ ದಿ ನಾಗಾಸ್ ಎಂಬ ಸುದ್ದಿ ಮಾಧ್ಯಮವೊಂದು ಬಿಜೆಪಿಯ ಈ ಆಫರ್ ಬಗ್ಗೆ ಟ್ವಿಟ್ಟರ್‍ನಲ್ಲಿ ತಿಳಿಸಿದೆ. ಯುಎನ್‍ಐ ಸುದ್ದಿ ಸಂಸ್ಥೆಯ ವರದಿಯಲ್ಲಿ, ಉಚಿತ ಜೆಲುಸಲೇಂ ಪ್ರವಾಸ ನಾಗಾಲ್ಯಾಂಡಿನ ಕ್ರೈಸ್ತರಿಗೆ ಮಾತ್ರ ಎಂದು ಹೇಳಿದೆ.

ಬಿಜೆಪಿಯ ಈ ಆಫರ್‍ಗೆ ಇದೀಗ ಟೀಕೆ ವ್ಯಕ್ತವಾಗಿದೆ. ಅದರಲ್ಲೂ ಹಜ್ ಸಬ್ಸಿಡಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಹಲವರು ಇದನ್ನ ಬೂಟಾಟಿಕೆ ಹಾಗೂ ಅವಕಾಶವಾದ ಎಂದು ಖಂಡಿಸಿದ್ದಾರೆ.

ಬಿಜೆಪಿ ಕ್ರೈಸ್ತರನ್ನ ಉಚಿತ ಪ್ರವಾಸಕ್ಕೆ ಕಳಿಸಲು ಮುಂದಾಗಿದೆ. ನಾನು ಹೇಳಿದ್ದು ನಿಜ. ಚುನಾವಣೆಯ ಅಗತ್ಯಕ್ಕೆ ತಕ್ಕಂತೆ ಬಿಜೆಪಿ ಸಬ್ಸಿಡಿ ನೀಡುವುದು ಮುಂದುವರಿಸಿದೆ. ಇಂಡಿಯಾ ಫಸ್ರ್ಟ್ ಎಂಬ ಬಿಜೆಪಿ ಹೇಳಿಕೆಯ ಅರ್ಥ ಇದೆ ಎಂದು ಅಖಿಲ ಭಾರತ ಮಜ್ಲಿಸ್ ಇ ಇಥೆಹಾದುಲ್ ಮುಸಲ್ಮಿನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳು ಹಜ್ ಸಬ್ಸಿಡಿ ರದ್ದು ಮಾಡಿದ್ದಾಗ ಹೇಳಿಕೆ ನೀಡಿದ್ದ ಕೆಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಘನತೆಯೊಂದಿಗೆ ಅಲ್ಪಸಂಖ್ಯಾತರ ಅಭಿವೃದ್ಧಿಯಾಗಬೇಕೆಂದು ನಂಬಿದೆಯೇ ಹೊರತು ಓಲೈಕೆಯಿಂದಲ್ಲ ಎಂದು ಹೇಳಿದ್ದರು.

ಓಲೈಕೆಯಿಲ್ಲದ ಅಭಿವೃದ್ಧಿಯಲ್ಲಿ ನಮಗೆ ನಂಬಿಕೆ ಇದೆ. ನಮಗೆ ನಂಬಿಕೆ ಇರುವುದು ಘನತೆಯುಕ್ತ ಅಭಿವೃದ್ಧಿಯಲ್ಲಿ. ಹಜ್ ಸಬ್ಸಿಡಿ ಹಣವನ್ನ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ನಖ್ವಿ ಹೇಳಿದ್ದರು.

ಕ್ರೈಸ್ತರನ್ನ ಜೆರುಸಲೇಂಗೆ ಕಳಿಸುವ ಬಿಜೆಪಿಯ ಆಫರ್‍ನಿಂದ ಇಸ್ರೇಲಿ ಮಾಧ್ಯಮಗಳು ಅಚ್ಚರಿಗೊಂಡಿದ್ದು, ಬಿಜೆಪಿಯ ಘೋಷಣೆಯನ್ನ ಪ್ರಚಾರದ ಆಶ್ವಾಸನೆಯಷ್ಟೇ ಎಂದು ಕರೆದಿದೆ. ಇದನ್ನೂ ಓದಿ: ಈ ವರ್ಷದಿಂದಲೇ ಮುಸ್ಲಿಮರಿಗೆ ನೀಡಲಾಗ್ತಿದ್ದ ಹಜ್ ಸಬ್ಸಿಡಿ ರದ್ದು: ಅಬ್ಬಾಸ್ ನಖ್ವಿ

Comments

Leave a Reply

Your email address will not be published. Required fields are marked *