ನನ್ನ ಸಾವಿಗೆ ತಹಶೀಲ್ದಾರ್ ಕಾರಣ: ವಾಟ್ಸಪ್ ಮೆಸೇಜ್ ಮಾಡಿ ಉಪ ತಹಶೀಲ್ದಾರ್ ನಾಪತ್ತೆ

ರಾಯಚೂರು: ಅನಧಿಕೃತ ಗೈರು ಹಾಜರಿ ಆರೋಪ ಸಾಬೀತು ಹಿನ್ನೆಲೆ ಸೇವೆಯಿಂದ ವಜಾಗೊಂಡಿರುವ ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ನಾಡಕಚೇರಿಯ ಉಪ ತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಸಂದೇಶ ಕಳುಹಿಸಿ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ.

ರಾಜೇಶ್ ದೇವಣಿ ಸೇವೆಯಿಂದ ವಜಾಗೊಂಡಿರುವ ಉಪ ತಹಶೀಲ್ದಾರ್. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ ಆದ್ರೆ ನನ್ನ ಸಾವಿಗೆ ತಹಶೀಲ್ದಾರ್ ಕಾರಣ ಅಂತ ಸಿಂಧನೂರು ತಹಶೀಲ್ದಾರ್ ಕಚೇರಿಯ ನೌಕರರ ವಾಟ್ಸಪ್ ಗ್ರೂಪ್‍ಗೆ ಮೆಸೇಜ್ ಹಾಕಿ ಈಗ ನಾಪತ್ತೆಯಾಗಿದ್ದಾರೆ.

ಸದ್ಯ ರಾಜೇಶ್ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದೆ. 2013-14 ರಲ್ಲಿ ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲೂಕಿನ ಕೊಹಿಸೂರಿನಲ್ಲಿ ಉಪತಹಶೀಲ್ದಾರ್ ಆಗಿದ್ದ ರಾಜೇಶ್ ದೇವಣಿ ಸತತ ಅನಧಿಕೃತ ಗೈರಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ವಿಚಾರಣೆ ನಡೆಸಿತ್ತು. ಆದ್ರೆ ರಾಜೇಶ್ ವಿಚಾರಣೆಗೂ ಗೈರುಹಾಜರಾಗಿದ್ದರು. ಇದರಿಂದಾಗಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ಸೇವೆಯಿಂದ ರಾಜೇಶ ವಜಾಗೊಳಿಸಿ ಆದೇಶ ಹೊರಡಿಸಿದ್ದರು. ಫೆಬ್ರವರಿ 7 ರಂದು ಆದೇಶ ಪ್ರತಿ ಕೈಗೆ ಸಿಗುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಜೇಶ್ ವಾಟ್ಸಪ್ ಸಂದೇಶ್ ಕಳುಹಿಸಿ ನಾಪತ್ತೆಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಂಧನೂರು ತಹಶೀಲ್ದಾರ್ ಶಂಕರಪ್ಪ, ವಾಟ್ಸಪ್ ಸಂದೇಶಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಬೀದರ್ ಜಿಲ್ಲೆಯಲ್ಲಿ ನಡೆದ ಇಲಾಖೆ ವಿಚಾರಣೆಯಿಂದ ವಜಾಗೊಂಡಿದ್ದಾರೆ. ವಾಟ್ಸಪ್ ಕಳುಹಿಸಿದ್ದಾರೆ ಎನ್ನಲಾದ ಆತ್ಮಹತ್ಯೆ ಸಂದೇಶವನ್ನೂ ನಾನು ನೋಡಿಲ್ಲ ಎಂದು ತಿಳಿಸಿದ್ದಾರೆ.

 

Comments

Leave a Reply

Your email address will not be published. Required fields are marked *