ಸೆಬಿಯಿಂದ ಕ್ಲೀನ್‌ಚಿಟ್‌| ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿಗೆ ಏರಿಕೆ

ಮುಂಬೈ: ಹಿಂಡನ್‌ಬರ್ಗ್‌ ಸಂಶೋಧನಾ ವರದಿಯಲ್ಲಿನ (Hindenburg Research Report) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಕ್ಲೀನ್‌ ಚಿಟ್‌ ನೀಡಿದ ಬೆನ್ನಲ್ಲೇ ಅದಾನಿ ಸಮೂಹ ಕಂಪನಿಗಳ (Adani Group) ಷೇರುಗಳ ಮೌಲ್ಯ ಏರಿಕೆ ಕಾಣಲು ಆರಂಭಿಸಿದೆ.

ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿ ರೂ. ಏರಿಕೆಯಾಗಿದ್ದು ಈಗ ಒಟ್ಟು ಕಂಪನಿಗಳ  ಮೌಲ್ಯ 13.96 ಲಕ್ಷ ಕೋಟಿ ರೂ.ಗೆ ತಲುಪಿದೆ.

ಯಾವುದು ಎಷ್ಟು ಏರಿಕೆ?
ಪವರ್‌ – 13.42% (84.75ರೂ.), ಟೋಟಲ್‌ ಗ್ಯಾಸ್‌ – 7.55% (45.85 ರೂ.), ಅದಾನಿ ಎಂಟರ್‌ಪ್ರೈಸಸ್‌ -5.25% (126 ರೂ.), ಗ್ರೀನ್‌ ಎನರ್ಜಿ -5.48% (53.60 ರೂ.), ಅದಾನಿ ಎನರ್ಜಿ ಸಲ್ಯೂಷನ್ಸ್‌ – 4.94% (41.35 ರೂ.), ಅದಾನಿ ಪೋರ್ಟ್ಸ್‌- 1.15% (16.20 ರೂ.) ಭಾರೀ ಏರಿಕೆ ಕಂಡಿದೆ. ಇದರ ಜೊತೆ ಎಸಿಸಿ, ಅಂಬುಜಾ ಸಿಮೆಂಟ್‌ಗಳ ಷೇರುಗಳ ಮೌಲ್ಯವೂ ಏರಿದೆ.

ಹಿಂಡನ್‌ಬರ್ಗ್‌ ಆರೋಪದಿಂದ ದೇಶೀಯ ಮತ್ತು ವಿದೇಶಿ ಹೂಡಿಕೆದಾರರು ಅದಾನಿ ಕಂಪನಿಗಳ ಷೇರು ಖರೀದಿಸಲು ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ಈಗ ಸೆಬಿಯಿಂದ ಕ್ಲೀನ್‌ಚಿಟ್‌ ಸಿಕ್ಕಿದ ಬೆನ್ನಲ್ಲೇ ಹೂಡಿಕೆದಾರರು ಹೂಡಿಕೆ ಮಾಡಲು ಆರಂಭಿಸಿದ್ದರಿಂದ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಏರಿಕೆ ಕಾಣಲು ಆರಂಭಿಸಿದೆ. ಇದನ್ನೂ ಓದಿ:  ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್‌ ಆಗಿದ್ದು ಯಾಕೆ?

ಸುದೀರ್ಘ ಅವಧಿಗಳ ಕಾಲ ತನಿಖೆ ನಡೆಸಿದ ಸೆಬಿ ಅದಾನಿ ಗ್ರೂಪ್‌ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ, ಆರೋಪವನ್ನು ಸಾಬೀತುಪಡಿಸಲು ಯಾವುದೇ ಬಲವಾದ ಸಾಕ್ಷಿಗಳು ಕಂಡುಬಂದಿಲ್ಲ ಎಂದು ತಿಳಿಸಿತ್ತು.

2022 ರ ಸೆಪ್ಟೆಂಬರ್‌ನಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ 22 ಲಕ್ಷ ಕೋಟಿ ರೂ. ಇತ್ತು. 2023 ರ ಜನವರಿಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಹೊಸ ಷೇರು ಬಿಡುಗಡೆ ಅಥವಾ ಎಫ್‌ಪಿಒ ಬಿಡುಗಡೆ ಮಾಡಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಹಿಂಡನ್‌ಬರ್ಗ್‌ ತನ್ನ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು.

ಅದಾನಿ ಸಮೂಹ ಮಾರಿಷಸ್ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಸ್ಟಾಕ್‌ ಮಾರುಕಟ್ಟೆಯಲ್ಲಿ ನೈಜ ಬೆಲೆಗಿಂತ ಕೃತಕ ಬೆಲೆಯಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಇದು ಅಕ್ರಮ ಎಂದು ಹಿಂಡನ್‌ಬರ್ಗ್‌ ಆರೋಪಿಸಿತ್ತು. ಈ ವರದಿ ಪ್ರಕಟವಾದ ನಂತರ ಅದಾನಿ ಸಂಪತ್ತು ಕರಗಲು ಆರಂಭವಾಗಿತ್ತು. ವರದಿ ಪ್ರಕಟಿಸಿದ ಬಳಿಕ 2023ರ ಫೆಬ್ರವರಿಯಲ್ಲಿ ಇದು 7 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿತ್ತು. ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್‌ ಅದಾನಿ (Gautam Adani) ಅವರು 32ನೇ ಸ್ಥಾನಕ್ಕೆ ಜಾರಿದ್ದರು.

ಹಿಂಡನ್‌ಬರ್ಗ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿ ತನಿಖೆ ನಡೆಸಿ ಅದಾನಿ ಕಂಪನಿ ಕ್ಲೀನ್‌ ಚಿಟ್‌ ನೀಡಿತ್ತು. ಮಾರಿಷಸ್‌ ಸರ್ಕಾರವೂ ಅದಾನಿ ಕಂಪನಿ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ನಮ್ಮ ಕಾನೂನಿನ ಪ್ರಕಾರ ಮಾರಿಷಸ್‌ನಲ್ಲಿ ಶೆಲ್ ಕಂಪನಿಗಳಿಗೆ ಅವಕಾಶವಿಲ್ಲ. ನಮ್ಮ ಷರತ್ತನ್ನು ಒಪ್ಪಿದ ಒಪ್ಪಿದ ಕಂಪನಿಗಳನ್ನು ಶೆಲ್‌ ಕಂಪನಿಗಳು ಎಂದು ಹೇಳುವುದು ಆಧಾರ ರಹಿತ ಎಂದು ಹೇಳಿತ್ತು.