ಬಿಜೆಪಿಯಿಂದ್ಲೇ ಧೋನಿ ರಾಜಕೀಯ ಇನ್ನಿಂಗ್ಸ್ ಆರಂಭ- ಕೇಂದ್ರ ಮಾಜಿ ಸಚಿವ

ನವದೆಹಲಿ: ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ತನ್ನ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸಿತ್ತು. ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಧೋನಿ ಭವಿಷ್ಯದ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಕೇಂದ್ರದ ಮಾಜಿ ಸಚಿವ ಸಂಜಯ್ ಪಾಸ್ವಾನ್ ಅವರು ಧೋನಿ ನಿವೃತ್ತಿ ಬಳಿಕ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಾಸ್ವಾನ್, ಧೋನಿ ನನ್ನ ಸ್ನೇಹಿತ. ಅವರು ಒಬ್ಬ ದಿಗ್ಗಜ ಆಟಗಾರರಾಗಿದ್ದಾರೆ. ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ. ಈಗಾಗಲೇ ಈ ಕುರಿತು ಹಲವು ದಿನಗಳಿಂದ ಮಾತುಕತೆ ನಡೆಯುತ್ತಿದೆ. ಆದರೆ ಅವರು ನಿವೃತ್ತಿ ಬಳಿಕವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ.

ಧೋನಿ ಶೀಘ್ರವೇ ಮೋದಿ ಟೀಂ ಸೇರುವ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಾರೆ. ಇತ್ತ ಧೋನಿ ಅವರ ತವರು ರಾಜ್ಯ ಜಾರ್ಖಂಡ್‍ನಲ್ಲಿ ಇದೇ ವರ್ಷ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿಯೇ ಧೋನಿ ಬಿಜೆಪಿಗೆ ಸೇರಿದರೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆಗುವ ನಿರೀಕ್ಷೆ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ಸೆಮಿಫೈನಲ್ ಪಂದ್ಯದ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಅವರು, ಧೋನಿ ತಮ್ಮ ಭವಿಷ್ಯದ ಬಗ್ಗೆ ಇದುವರೆಗೂ ತಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *