ಈರುಳ್ಳಿ ಆಯ್ತು, ಈಗ ಮೊಟ್ಟೆ ಸರದಿ- 2 ತಿಂಗ್ಳಿಂದ ಏರಿಕೆಯಾಗ್ತಲೇ ಇದೆ ರೇಟ್

ಬೆಂಗಳೂರು: ದೇಶದ ಹಲವೆಡೆ ಈಗಾಗಲೇ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಈರುಳ್ಳಿ ದರವಂತೂ ದಿನೇ ದಿನೇ ಗಗನಮುಖಿಯಾಗಿದ್ದು ಗ್ರಾಹಕರು ಈರುಳ್ಳಿ ಮನೆಗೆ ತರೋದನ್ನೇ ಬಿಟ್ಟಿದ್ದರು. ಈರುಳ್ಳಿ ಬಳಿಕ ಇದೀಗ ಮೊಟ್ಟೆ ಬೆಲೆಯೂ ದುಬಾರಿಯಾಗಿದೆ.

ಚಳಿಗಾಲದಲ್ಲಿ ಮೊಟ್ಟೆ ತಿನ್ನುವವರ ಸಂಖ್ಯೆ ಹೆಚ್ಚು. ಬಿಸಿಬಿಸಿ ಆಮ್ಲೆಟ್ ಹಾಕೋಣ ಅನ್ನೋರು ಈರುಳ್ಳಿ ಜೊತೆಗೆ ಮೊಟ್ಟೆ ರೇಟ್ ನೋಡಿ ಸಪ್ಪೆ ಮೋರೆ ಹಾಕುವಂತಾಗಿದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದರ ಜೊತೆಗೆ ದೇಹದ ಇಮ್ಯುನಿಟಿ ಶಕ್ತಿ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಮೊಟ್ಟೆಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಮತ್ತೊಂದೆಡೆ ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಯೂ ಹತ್ತಿರವಾಗಿದೆ. ಕೇಕ್ ಸೇರಿದಂತೆ ಇತರೇ ಖಾದ್ಯಗಳ ತಯಾರಿಕೆಗೆ ಅಗತ್ಯವಾಗಿ ಮೊಟ್ಟೆ ಬೇಕೇಬೇಕಾಗಿದೆ. ಹೀಗಾಗಿ ಕಳೆದ ಎರಡು ವಾರಗಳಿಂದ ಕೋಳಿಮೊಟ್ಟೆ ದರ ದಿನಂಪ್ರತಿ 5 ರಿಂದ 10 ಪೈಸೆಯಂತೆ ಹೆಚ್ಚಾಗಿದೆ.

ಸಗಟು ದರದಲ್ಲಿ ಒಂದು ಮೊಟ್ಟೆಗೆ 5 ರೂಪಾಯಿ ಇದೆ. ಚಿಲ್ಲರೆ ದರದಲ್ಲಿ ಫಾರಂ ಕೋಳಿ ಮೊಟ್ಟೆ 6 ರೂ.ವರೆಗೆ ಮಾರಾಟವಾಗುತ್ತಿದೆ. ನಾಟಿ ಕೋಳಿ ಮೊಟ್ಟೆ 7-8 ರೂ.ವರೆಗೆ ತಲುಪಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರವಲ್ಲದೆ ನೆರೆಯ ರಾಜ್ಯ ಆಂಧ್ರಪ್ರದೇಶ, ತೆಲಂಗಾಣ, ಸೇರಿದಂತೆ ಇತರೇ ರಾಜ್ಯಗಳ ಮಾರುಕಟ್ಟೆಗಳಲ್ಲೂ ಮೊಟ್ಟೆ ದರ ಏರಿಕೆಯಾಗಿದೆ. ಈ ದರಗಳು ಜನವರಿವರೆಗೂ ಕಡಿಮೆಯಾಗಲ್ಲ ಅಂತಲೇ ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *