ಗುರುವಾಯೂರ್‌ಗೆ ನೀವು ಬಂದು ಹೋದ್ಮೇಲೆ ಕೇರಳದಲ್ಲಿ ಪ್ರವಾಹ ಬಂತು: ಮೋದಿಗೆ ರಾಹುಲ್ ಟಾಂಗ್

ನವದೆಹಲಿ: ನೀವು ಗುರುವಾಯೂರ್‌ಗೆ ಬಂದು ಹೋದ ಮೇಲೆಯೇ ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಬಂತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಟ್ವೀಟಿಗೆ ಟಾಂಗ್ ಕೊಟ್ಟಿದ್ದಾರೆ.

ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ಕೊಟ್ಟ ನೆನಪನ್ನು ಮೆಲುಕು ಹಾಕಿದ ಮೋದಿ ಅವರಿಗೆ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಮಾನ್ಯ ಮೋದಿ ಅವರೇ, ನೀವು ಗುರುವಾಯೂರ್ ಮಂದಿರಕ್ಕೆ ಹೋಗಿ ಬಂದ ಬಳಿಕವೇ ಕೇರಳ ಪ್ರವಾಹಕ್ಕೆ ತುತ್ತಾಯಿತು ಎಂದು ಲೇವಡಿ ಮಾಡಿದ್ದಾರೆ. ಮೋದಿ ಅವರು ಟ್ವೀಟ್ ಮಾಡಿ, ವೈಯಕ್ತಿಕವಾಗಿ ಕೇರಳ ನನಗೆ ವಿಶೇಷವಾಗಿದೆ. ಕೇರಳಕ್ಕೆ ಭೇಟಿ ನೀಡಲು ನನಗೆ ಹಲವಾರು ಅವಕಾಶಗಳು ಸಿಗುತ್ತಿದೆ. ಜನರು ಮತ್ತೊಮ್ಮೆ ನನ್ನನ್ನು ಆರಿಸಿ ನನಗೆ ದೊಡ್ಡ ಜವಾಬ್ದಾರಿಯನ್ನು ಕೊಟ್ಟು ಆಶೀರ್ವದಿಸಿದ ಬಳಿಕ ನಾನು ಮಾಡಿದ ಮೊದಲ ಕೆಲಸವೇ ಗುರುವಾಯೂರ್‌ನ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಎಂದು ಬರೆದುಕೊಂಡು ನೆನಪನ್ನು ಮೆಲುಕು ಹಾಕಿದ್ದರು.

2019ರ ಲೋಕಸಭಾ ಚುನಾವಣೆಯ ಭರ್ಜರಿ ಗೆಲುವು ಸಾಧಿಸಿ 2ನೇ ಬಾರಿಗೆ ಮೋದಿಯವರು ಪ್ರಧಾನಿಯಾದ ಬಳಿಕ ಕೇರಳಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಪ್ರಸಿದ್ಧ ಗುರುವಾಯೂರ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಜೊತೆಗೆ ತಾವರೆ ಹೂವುಗಳಿಂದ ತುಲಾಭಾರ ಕೂಡ ಮಾಡಿಸಿದ್ದರು.

ಮೋದಿಯವರ ಟ್ವೀಟ್‍ಗೆ ರಾಹುಲ್ ಗಾಂಧಿ ರೀ- ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಆತ್ಮೀಯ ಮೋದಿಯವರೇ, ನೀವು ಗುರುವಾಯೂರ್‍ಗೆ ಭೇಟಿ ಕೊಟ್ಟ ನಂತರವೇ ಕೇರಳ ಒಂದು ದೊಡ್ಡ ಪ್ರವಾಹಕ್ಕೆ ತುತ್ತಾಯ್ತು. ಈಗ ಕೇರಳಕ್ಕೆ ಭೇಟಿ ಕೊಡಿ ಆಗ ಮೆಚ್ಚುತ್ತೇವೆ. ಅಲ್ಲಿ ಹಲವಾರು ಸಾವು-ನೋವುಗಳು ಸಂಭವಿಸಿವೆ. ಪ್ರವಾಹ ಪೀಡಿತ ಇತರೆ ರಾಜ್ಯಗಳಿಗೆ ಪರಿಹಾರ ನೀಡಿದಂತೆ ಕೇರಳವೂ ಈಗ ಕೇಂದ್ರದ ಪರಿಹಾರಕ್ಕಾಗಿ ಕಾಯುತ್ತಿದೆ. ಇದು ಅನ್ಯಾಯ ಎಂದು ಬರೆದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೇರಳದಲ್ಲಿ ಪ್ರವಾಹದಿಂದ 125 ಮಂದಿ ಸಾವನ್ನಪ್ಪಿದ್ದಾರೆ. ಮಲಪ್ಪುರಂನಲ್ಲಿ 60, ವಯನಾಡುನಲ್ಲಿ 14 ಮಂದಿ ಬಲಿಯಾಗಿದ್ದಾರೆ. ಇದೇ ವಾರ ರಾಹುಲ್ ಅವರು ಮೂರು ದಿನಗಳ ಕಾಲ ವಯನಾಡುವಿನಲ್ಲಿ ಪ್ರವಾಸ ಕೈಗೊಂಡು, ಪ್ರವಾಹ ಎನ್ನೆಲ್ಲಾ ಹಾನಿ ಉಂಟು ಮಾಡಿದೆ ಎನ್ನುವ ಮಾಹಿತಿ ಹಾಗೂ ಜನರ ಸಂಕಷ್ಟಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಪ್ರವಾಹ ಪೀಡಿತ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *