ಮದುವೆ ಆಗಿ ಮುಹೂರ್ತ ಫಿಕ್ಸ್ ಆಗಿದೆ- ಬಜೆಟ್ ಮಂಡಿಸಿದ್ರೆ ಮಂಡಿಸಲಿ: ಸಿಎಂ ಇಬ್ರಾಹಿಂ

ಬೆಂಗಳೂರು: ನೂತನ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆ ವಿಚಾರದಲ್ಲಿ ಉಂಟಾದ ಗೊಂದಲಕ್ಕೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂರವರು ಹೊಸ ಸಿಎಂ ಹುಮ್ಮಸ್ಸಿನಲ್ಲಿದ್ದಾರೆ ಬಜೆಟ್ ಮಂಡಿಸಿದರೆ ಮಂಡಿಸಲಿ ಎಂದು ಹೇಳಿಕೆ ನೀಡಿದ್ದಾರೆ.

ಇಂದು ಹೊಸ ಬಜೆಟ್ ಮಂಡನೆ ಕುರಿತು ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಮದುವೆ ಆಗಿ ಮುಹೂರ್ತ ಫಿಕ್ಸ್ ಆಗಿದೆ. ಮುಖ್ಯಮಂತ್ರಿಯವರು ಕೂಡ ಹೊಸ ಹುರುಪಿನಲ್ಲಿದ್ದಾರೆ. ಹೀಗಾಗಿ ಬಜೆಟ್ ಮಂಡನೆ ವಿಚಾರದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹೊಸ ಬಜೆಟ್ ಮಂಡಿಸಿದರೆ ಮಂಡಿಸಲಿ ಬಿಡಿ ಎಂದು ಉತ್ತರಿಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ಸಚಿವ ಸಂಪುಟದ ಗೊಂದಲದ ಕುರಿತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೋಡಿಕೊಳ್ಳುತ್ತಾರೆ ಎಂದರು.

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್‍ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂರವರು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಾನು ಹೇಳಿದ್ದು ಅಮಾಯಕ ಯುವಕರ ತಲೆ ಕೆಡಿಸಿದವರು ಯಾರು ಎಂದು? ಆರೋಪಿಗಳು ಈಗಾಗಲೇ ನಾಲ್ಕು ತಂಡಗಳಾಗಿ ಹತ್ಯೆ ಮಾಡಿರುವುದಾಗಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಹತ್ಯೆಗೆ ಆರೋಪಿಗಳಿಗೆ ಪ್ರೇರೆಪಿಸಿದ್ದು ಯಾರು ಎಂದು ಪ್ರಮೋದ್ ಮುತಾಲಿಕ್ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರಿಗೆ ಪ್ರಶ್ನಿಸಿದ್ದಾರೆ.

ಮನುಷ್ಯನ ಜೀವನ ಶಾಶ್ವತ ಅಲ್ಲ, ನಾವು 60-70 ವರ್ಷ ಬದುಕುತ್ತೇವೆ. ಈ ವೇಳೆ ಒಳ್ಳೆಯ ಕೆಲಸಗಳನ್ನು ಮಾಡಬೇಕು. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು, ನಮ್ಮಲ್ಲಿ ವಿಷ ಬೀಜ ಬಿತ್ತುತ್ತಿರುವುದು ಯಾರು? ಯಾವುದೇ ಧರ್ಮದವರಾದರೂ ಇಂತಹ ಘಟನೆಗಳನ್ನು ಖಂಡಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ದೇಶಕ್ಕೆ ಭಾರೀ ಗಂಡಾಂತರ ಎದುರಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಮಗೆ ಅಟಲ್ ಬಿಹಾರಿ ವಾಜಪೇಯಿ ಹಾಗೂ ಅಡ್ವಾಣಿಯವರ ಮೇಲೆಯೂ ಗೌರವವಿದೆ. ಮುತಾಲಿಕ್ ರವರು ಆಚಾರವಿಲ್ಲದ ನಾಲಿಗೆ ಎಂಬಂತೆ ಮಾತನಾಡಬಾರದು ಎಂದು ಹೇಳಿದರು.

Comments

Leave a Reply

Your email address will not be published. Required fields are marked *