ಪತ್ನಿ ಮೇಲಿನ ಸಿಟ್ಟಿಗೆ ಮೂವರು ಮಕ್ಕಳನ್ನು ನದಿಗೆ ಎಸೆದು ಕೊಂದ!

ಹೈದರಾಬಾದ್: ಆಂಧ್ರದ ವ್ಯಕ್ತಿಯೊಬ್ಬ ಪತ್ನಿ ಮೇಲಿನ ಸಿಟ್ಟಿಗೆ ತನ್ನ ಮೂವರು ಗಂಡು ಮಕ್ಕಳನ್ನು ನದಿಗೆ ಎಸೆದು ಕೊಲೆ ಮಾಡಿರುವ ಘಟನೆ ಚಿತ್ತೂರ್ ಜಿಲ್ಲೆಯಲ್ಲಿ ನಡೆದಿದೆ.

ಮಕ್ಕಳಾದ ಪುನೀತ್(5), ಸಂಜಯ್(3), ಮತ್ತು ರಾಹುಲ್(2 ತಿಂಗಳು) ಕೊಲೆ ಮಾಡಿ ವೆಂಕಟೇಶ್ ಹತ್ಯೆಗೈದು ಈಗ ಪರಾರಿಯಾಗಿದ್ದಾನೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತನ್ನ ಹೆಂಡತಿಯೊಂದಿಗೆ ಗಲಾಟೆ ಮಾಡಿಕೊಂಡ ಬಳಿಕ ತಂದೆ ವೆಂಕಟೇಶ್ ಮೂವರು ಮಕ್ಕಳನ್ನು ಕರೆದುಕೊಂಡು ಹೋಗಿ ನದಿಯೊಳಗೆ ಎಸೆದಿದ್ದಾನೆ. ನಂತರ ಸೋಮವಾರ ಬೆಳಗ್ಗೆ ಮಕ್ಕಳ ಮೃತದೇಹಗಳು ನೀರಿನಲ್ಲಿ ತೇಲಾಡುತ್ತಿರುವುದನ್ನು ಗ್ರಾಮಸ್ಥರು ನೋಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ವೆಂಕಟೇಶ್ ಕಟ್ಟಡ ನಿರ್ಮಾಣದ ಕೆಲಸವನ್ನು ಮಾಡುತ್ತಿದ್ದನು. ಪತ್ನಿ ಅಮರಾವತಿ ಈತನಿಗೆ ಎರಡನೇ ಪತ್ನಿ. ಮೊದಲ ಹೆಂಡತಿಗೆ ಮಕ್ಕಳಾಗದ ಕಾರಣ ಎರಡನೇ ಮದುವೆಯಾಗಿದ್ದನು.

ವೆಂಕಟೇಶ್ ಮದ್ಯಸೇವನೆ ಮಾಡಿ ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೇ ಪತ್ನಿ ಅಮರಾವತಿ ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದಳು. ಭಾನುವಾರ ರಾತ್ರಿ ವೆಂಕಟೇಶ್ ಮದ್ಯಸೇವನೆ ಮಾಡಿ ಅಮರಾವತಿ ತವರು ಮನೆಗೆ ತೆರಳಿ ಆಕೆಯನ್ನು ಮನೆಗೆ ಬರುವಂತೆ ಒತ್ತಾಯಿಸಿದ್ದಾನೆ. ಅಮರಾವತಿ ನಾನು ಆತನ ಜೊತೆ ತೆರಳುವುದಿಲ್ಲ ಎಂದು ಹೇಳಿದ್ದಾಳೆ. ವೆಂಕಟೇಶ್ ಕುಡಿದ ನಶೆಯಲ್ಲೇ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಹಳ್ಳಿಗೆ ತೆರಳುತ್ತಾನೆ. ಹಳ್ಳಿಗೆ ಬರುವ ದಾರಿ ಮಧ್ಯದಲ್ಲಿ ಮೂವರು ಮಕ್ಕಳನ್ನು ನದಿಯೊಳಗೆ ಎಸೆದು ಏನು ಆಗಿಯೇ ಇಲ್ಲವೆಂಬಂತೆ ಮನೆಗೆ ತೆರಳಿ ಮಲಗುತ್ತಾನೆ. ಸೋಮವಾರ ನೀರಿನಲ್ಲಿ ತೆಲುತ್ತಿದ್ದ ಕಂದಮ್ಮಗಳ ದೇಹವನ್ನು ಕಂಡ ಗ್ರಾಮಸ್ಥರು ಅಮರಾವತಿಗೆ ಮಾಹಿತಿ ತಿಳಿಸುತ್ತಾರೆ.

ವೆಂಕಟೇಶ್ ತನ್ನ ಮಕ್ಕಳನ್ನು ಈ ರೀತಿ ಕ್ರೂರವಾಗಿ ಕೊಲ್ಲುತ್ತಾನೆಂದು ಅಂದುಕೊಂಡಿರಲಿಲ್ಲ ಎಂದು ಅಮರಾವತಿ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಕೃತ್ಯವನ್ನು ಎಸಗಿ ಪರಾರಿಯಾಗಿರುವ ಆರೋಪಿ ವೆಂಕಟೇಶ್‍ನನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *