ದಶಕಗಳ ನಂತ್ರ ಸಿನಿಮಾ ರೀತಿಯಲ್ಲಿ ಒಂದಾದ ಹಾಸನದ ಅಣ್ಣ-ತಂಗಿ

ಹಾಸನ: ಸಿನಿಮಾ ಕಥೆಯನ್ನೇ ನಾಚಿಸುವಂತೆ ಅಣ್ಣ-ತಂಗಿಯರಿಬ್ಬರು ದಶಕಗಳ ನಂತರ ಮತ್ತೆ ಒಂದಾದ ಅಪರೂಪದ ಘಟನೆ ಹಾಸನದಲ್ಲಿ ನಡೆದಿದೆ.

ಅಣ್ಣ ಮಂಜುನಾಥ್, ತಂಗಿ ಭಾಗ್ಯ. ಬಾಲ್ಯದಲ್ಲೇ ಹೆತ್ತವರನ್ನ ಕಳೆದುಕೊಂಡು, ಸಂಬಂಧಿಕರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿ ಬೀದಿ ಪಾಲಾಗಿದ್ದ ಅಣ್ಣ ತಂಗಿ ಇದೀಗ ಮತ್ತೆ ಒಂದಾಗಿದ್ದಾರೆ. ಇವರಿಬ್ಬರು ಒಬ್ಬರೊಬ್ಬರನ್ನ ನೋಡಿ ತುಂಬಾ ವರ್ಷಗಳಾಗಿದ್ದು, ತಮ್ಮನ್ನು ತಾವೂ ನೋಡಿ ನಂಬಲಾಗದ ರೀತಿಯಲ್ಲಿ ಒಂದಾಗಿದ್ದಾರೆ. ಈ ಜನ್ಮದಲ್ಲಿ ಮತ್ತೆ ಒಂದಾಗುತ್ತೀವಿ ಎಂಬ ಪರಿಕಲ್ಪನೆ ಇಲ್ಲದಿದ್ದರೂ ಈ ಸಹೋದರ-ಸಹೋದರಿ ಮತ್ತೆ ಒಂದಾಗಿದ್ದು ನಿಜಕ್ಕೂ ಪಾವಡವೇ ಆಗಿದೆ.

ನಡೆದಿದ್ದೇನು?
ಮಂಜುನಾಥ್ ಮತ್ತು ಭಾಗ್ಯ ಚಿಕ್ಕವರಿದ್ದಾಗ ನೋಡಿಕೊಳ್ಳಲು ಕಷ್ಟವಾಗುತ್ತೆ ಎಂದು ಇಬ್ಬರು ಮಕ್ಕಳನ್ನು ಅವರ ಚಿಕ್ಕಮ್ಮ ಹೊಳೆನರಸೀಪುರ ತಾಲೂಕಿನ ಮಳಲಿ ಗ್ರಾಮದ ದೇವಸ್ಥಾನದ ಬಳಿ ಬಿಟ್ಟು ಹೋಗಿದ್ದರು. ಬಳಿಕ ಇಬ್ಬರು ದೇವಸ್ಥಾನದಲ್ಲಿ ಪ್ರಸಾದವನ್ನ ತಿಂದು ಎರಡು ದಿನ ದೂಡಿದ ಇವರಿಗೆ ಮೂರನೇ ದಿನ ಪ್ರಸಾದವೇ ಸಿಗಲಿಲ್ಲ. ಆಗ ಈ ಮಕ್ಕಳ ದಯನೀಯ ಸ್ಥಿತಿಯನ್ನ ನೋಡಿದ ಗ್ರಾಮದ ಶಿಕ್ಷಕ ಗೌಡೇಗೌಡ ಇವರಿಗೆ ಆಶ್ರಯ ನೀಡಿದ್ದರು. ಆಗ ಇಬ್ಬರು ಮಕ್ಕಳು ಇರುವುದನ್ನು ನೋಡಿದ ಗ್ರಾಮದ ಮಹಿಳೆಯೊಬ್ಬರು ತಾನು ಬಾಲಕಿಯೊಬ್ಬಳನ್ನ ಸಾಕುವುದಾಗಿ ಕರೆದುಕೊಂಡು ಹೋಗಿದ್ದಾರೆ.

ಮಹಿಳೆ ಕರೆದುಕೊಂಡು ಹೋದ ಕೆಲವೇ ದಿನಗಳಲ್ಲಿ ಆ ಬಾಲಕಿಯನ್ನು ಸಕಲೇಶಪುರದ ಕಾಫಿ ತೋಟದ ಮಾಲೀಕನಿಗೆ ಮಾರಾಟ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಬಾಲಕಿ ಕಾಣೆಯಾಗಿದ್ದಾಳೆ ಎಂದು ನಾಟಕ ಆಡಿದ್ದಳು. ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಚಿಕ್ಕ ಹುಡುಗಿ ಭಾಗ್ಯ ಅಲ್ಲಿ ಕಿರುಕುಳ ಹೆಚ್ಚಾದಾಗ ಇತ್ತೀಚಿಗೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಳು. ಕೊನೆಗೆ ಮಕ್ಕಳ ರಕ್ಷಣಾ ಸಮಿತಿಯವರು ಭಾಗ್ಯಳಿಗೆ ಆಶ್ರಯ ನೀಡಿ ವಿಚಾರಿಸಿದಾಗ ತನ್ನ ಬಾಲ್ಯದ ಘಟನೆಯನ್ನ ಎಳೆ ಎಳೆಯಾಗಿ ಹೇಳಿದ್ದಳು.

ಭಾಗ್ಯ ಹೇಳಿದ ಮಾಹಿತಿ ಆಧರಿಸಿ ಮಕ್ಕಳ ರಕ್ಷಣ ಸಮಿತಿಗೆ ಹುಡುಕಾಟ ಆರಂಭಿಸಿತ್ತು. ಕೊನೆಗೂ ಭಾಗ್ಯಳ ಅಣ್ಣ ಮಂಜುನಾಥನಿಗೆ ಆಶ್ರಯ ನೀಡಿದ ಮನೆ ಸಿಕ್ಕಿದ್ದು, ಅಣ್ಣನ ಬಳಿಗೆ ಭಾಗ್ಯಳನ್ನು ಕರೆದುಕೊಂಡು ಹೋಗಿದ್ದಾರೆ. ಮಂಜುನಾಥನನ್ನ ಮನೆ ಮಗನಿಗಿಂತಲೂ ಒಂದು ಪಟ್ಟು ಹೆಚ್ಚು ಪ್ರೀತಿ ತೋರಿಸಿ ಸಲಹುತ್ತಿದ್ದ ಶಿಕ್ಷಕ ಗೌಡೇಗೌಡರು ಆರು ತಿಂಗಳ ಹಿಂದಷ್ಟೇ ಸಾವನ್ನಪ್ಪಿದ್ದರು. ಅವರ ಮಗ ಪೂರ್ಣಚಂದ್ರ ತೇಜಸ್ವಿ, ಮಂಜುನಾಥನನ್ನ ಹೊಣೆ ಹೊತ್ತು ತಮ್ಮನಿಗಿಂತ ಹೆಚ್ಚಿನ ಪ್ರೀತಿ ತೋರಿಸಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡಿಸುತ್ತಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಯ ಪ್ರಯತ್ನದಿಂದಾಗಿ ಮಂಗಳವಾರ ಅಣ್ಣ ತಂಗಿ ದಶಕದ ನಂತರ ಒಂದಾಗಿ ಖುಷಿಪಟ್ಟಿದ್ದಾರೆ. ತಂಗಿಯನ್ನ ಬಿಟ್ಟು ಇರಲಾರೆ ಅಂತಾ ಅಣ್ಣ ಮಂಜುನಾಥ್ ಹಠ ಹಿಡಿದಿದ್ದಾನೆ. ತಂಗಿಯೂ ಅಣ್ಣನ ಪ್ರೀತಿ ನನಗೆ ಬೇಕು ಎಂದು ಆಸೆ ಪಟ್ಟಿದ್ದಾಳೆ. ಮುಂದೇನು ಅನ್ನೋ ತೀರ್ಮಾನವನ್ನ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ತೆಗೆದುಕೊಳ್ಳಬೇಕಾಗಿದೆ.

Comments

Leave a Reply

Your email address will not be published. Required fields are marked *