ಸಿಎಲ್‍ಪಿ ಸಭೆ ಬಳಿಕ ಅತೃಪ್ತರ ರಣಕೇಕೆ!

-ಪ್ಲಾನ್‍ನಲ್ಲಿ ಬದಲಾವಣೆ ತಂದ ಬಿಜೆಪಿ
-ರಾಜೀನಾಮೇ ನೀಡ್ತಾರಾ ಆರು ಶಾಸಕರು?

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆ ಅಂತ್ಯದ ಬಳಿಕ ಅತೃಪ್ತ ಶಾಸಕರು ತಮ್ಮ ಹಠವನ್ನು ಸಾಧಿಸಿದ ಖುಷಿಯಲ್ಲಿದ್ದಾರಂತೆ. ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಮತ್ತು ನಾಗೇಂದ್ರ ಯಾವ ನಾಯಕರ ಮಾತಿಗೂ ಬೆಲೆ ಕೊಡದೇ ಸಭೆಗೆ ಗೈರಾಗಿದ್ದರು. ಬೆಂಗಳೂರಿನಲ್ಲಿದ್ದ ಶಾಸಕ ಮಾತ್ರ ಆಗಿದ್ದು ಆಗ್ಲಿ ನಾನು ಮಾತ್ರ ಸಭೆ ಬರಲ್ಲ ಅಂದಿದ್ರಂತೆ. ಮಾಜಿ ಸಿಎಂ ಸಿದ್ದರಾಮಯ್ಯನವರು, ನಾಗೇಂದ್ರ ಕೋರ್ಟ್ ಕೆಲಸದಲ್ಲಿದ್ದರಿಂದ ಬರೋದಕ್ಕೆ ಆಗಿಲ್ಲ ಅಂತಾ ಹೇಳಿದ್ದಾರೆ.

ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಶಾಸಕ ನಾಗೇಂದ್ರ ನಿರ್ಧರಿಸಿದ್ದಾರಂತೆ. ಸದ್ಯ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿಯವರ ಸೂಚನೆಗಾಗಿ ಕಾಯುತ್ತಿದ್ದು, ಗ್ರೀನ್ ಸಿಗ್ನಲ್ ಸಿಕ್ಕಿದ ಕೂಡಲೇ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.

ಬಿಜೆಪಿಯವರ ಮಾತು ಕೇಳಿ ನಿಮ್ಮ ರಾಜಕೀಯ ಭವಿಷ್ಯದ ಮೆಲೆ ಕಲ್ಲು ಹಾಕಿಕೊಳ್ಳಬೇಡಿ. ಇದು ಅಂತಿಮ ಅವಕಾಶ. ಇಲ್ಲವಾದರೆ ನಾನೇನು ಸಹಾಯ ಮಾಡಲು ಆಗುವದಿಲ್ಲ. ಮುಂದಿನ ನಿರ್ಧಾರ ನಿಮ್ಮದು ಎಂದು ಸಿದ್ದರಾಮಯ್ಯನವರು ಅತೃಪ್ತ ಶಾಸಕರಿಗೆ ಅಂತಿಮ ಗಡವು ನೀಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಅತೃಪ್ತರಿಗೆ ನೋಟಿಸ್ ನೀಡುವ ಕುರಿತು ರಾಷ್ಟ್ರ ರಾಜಧಾನಿಯ ರಾಜಕೀಯ ತಜ್ಞರೊಂದಿಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಇತ್ತ ಆಪರೇಷನ್ ಕಮಲದಿಂದ ಶಾಸಕರನ್ನು ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ರೆಸಾರ್ಟ್ ಮೊರೆ ಹೋಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಮ್ಮ ಪಕ್ಷದ ಸಾಮಥ್ರ್ಯವನ್ನು ರಾಜ್ಯದ ಜನತೆಗೆ ತೋರಿಸಿದ್ದೇವೆ. ಐಟಿ, ಇಡಿ, 50 ಕೋಟಿ, 100 ಕೋಟಿ ಈ ರೀತಿಯಲ್ಲಿ ಬಿಜೆಪಿಯವರು ಟಾರ್ಚರ್ ಕೊಡುತ್ತಿದ್ದಾರೆ. ಬಹಿರಂಗವಾಗಿಯೇ ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಜನರನ್ನು ಭಯ ಬೀಳಿಸುವಂತಹ ಪಾರ್ಟಿ ಬಿಜೆಪಿ. ಹಾಗಾಗಿ ನಮ್ಮ ಶಾಸಕರಿಗೆ ಧೈರ್ಯ ತುಂಬುವ ಕೆಲಸ ನಡೆಯಬೇಕಿದೆ ಎಂದು ಹೇಳಿದ್ದಾರೆ.

ಪ್ಲಾನ್ ಬದಲಿಸಿದ ಬಿಜೆಪಿ: ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ಮೂರರಿಂದ ನಾಲ್ಕು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ಇಂದು ಸಂಜೆ ಗುರುಗ್ರಾಮದಿಂದ ಹಿಂದಿರುಗಬೇಕಿದ್ದ ಬಿಜೆಪಿ ಶಾಸಕರು ಇನ್ನು ಕೆಲವು ದಿನ ಅಲ್ಲಿಯೇ ಇರಲಿದ್ದಾರೆ. ರಾಜ್ಯದಲ್ಲಿ ಆರು ಶಾಸಕರ ರಾಜೀನಾಮೆ ಬಳಿಕ ಬೆಂಗಳೂರಿಗೆ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.

ಒಂದು ವಾರದಿಂದ ಕಾಂಗ್ರೆಸ್‍ನವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. 3 ಗಂಟೆಗೆ ಆರಂಭವಾಗಬೇಕಿದ್ದ ಸಿಎಲ್‍ಪಿ ಸಭೆ 5 ಗಂಟೆಗೆ ಆರಂಭವಾಗಿದೆ. ಇದರಿಂದಾಗಿ ಅವರಲ್ಲಿಯೇ ಅಸಮಧಾನ ಹೊಗೆ ಕಾಣುತ್ತಿದೆ. ಬಿಜೆಪಿಯ ಐದು ಶಾಸಕರು ನಮ್ಮ ಬಳಿ ಇದ್ದಾರೆ ಅಂತ ಕಾಂಗ್ರೆಸ್ ನಾಯಕರು ಪದೇ ಪದೇ ಹೇಳುತ್ತಿದ್ದರು. ಹೀಗಾಗಿ ನಮ್ಮ ಶಾಸಕರನ್ನು ದೆಹಲಿಗೆ ಕರೆಸಿಕೊಂಡು ಅಲ್ಲಿಂದ ಗುರುಗ್ರಾಮದ ರೆಸಾರ್ಟ್ ಗೆ ಕಳುಹಿಸಲಾಗಿದೆ ಎಂಬ ಮಾಹಿತಿಯನ್ನು ಯಡಿಯೂರಪ್ಪನವರು ಹೊರಹಾಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *