ಭಾರೀ ವಿರೋಧದ ಬೆನ್ನಲ್ಲೇ ಸೆಕ್ಯೂರಿಟಿ ಕಂಪನಿಗೆ ನೀಡಿದ್ದ ಶಿಕ್ಷಕರ ನೇಮಕಾತಿ ಟೆಂಡರ್ ರದ್ದು

– ಹೊರಗುತ್ತಿಗೆ ಮೂಲಕ ಶಿಕ್ಷಕರ ನೇಮಕಕ್ಕೆ ಟೆಂಡರ್‌
– ಡಿಕೆಶಿ ಸೂಚನೆ ಬೆನ್ನಲ್ಲೇ ಆದೇಶ ರದ್ದು

ಬೆಂಗಳೂರು: ಖಾಸಗಿ ಸೆಕ್ಯುರಿಟಿ ಮತ್ತು ಡಿಟೆಕ್ಟಿವ್ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಶಿಕ್ಷಕರನ್ನು (Teachers) ನೇಮಿಸಿಕೊಳ್ಳಲು ಮುಂದಾಗಿದ್ದ ಬಿಬಿಎಂಪಿ (BBMP) ಈಗ ಈ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ.

ಬಿಬಿಎಂಪಿ ನಿರ್ಧಾರ ಸರ್ಕಾರ ಬಾರಿ ಮುಜುಗರ ತಂದಿತ್ತು. ಅಷ್ಟೇ ಅಲ್ಲದೇ ಮಾಜಿ ಶಿಕ್ಷಣ ಸಚಿವರು ಸೇರಿ ಹಲವರಿಂದ ಟೀಕೆ ವ್ಯಕ್ತವಾಗಿತ್ತು.‌ ಇದರಿಂದ ಎಚ್ಚೆತ್ತ ಸರ್ಕಾರ ಟೆಂಡರ್ (Tender) ರದ್ದುಗೊಳಿಸಿ ಅಧಿಕೃತ ಆದೇಶ ಪ್ರಕಟಿಸಿದೆ.

ಸೆಕ್ಯುರಿಟಿ ಕಂಪನಿಗೆ ನೀಡಿದ ಶಿಕ್ಷಕರ ನೇಮಕಾತಿ ಟೆಂಡರ್‌ ಅನ್ನು ರದ್ದು ಮಾಡುವಂತೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಸೂಚನೆ ಬೆನ್ನಲ್ಲೇ ಸೆಕ್ಯುರಿಟಿ ಕಂಪನಿಗೆ ನೀಡಿದ ಗುತ್ತಿಗೆಯನ್ನ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರದ್ದು ಮಾಡಿ ಆದೇಶ ಮಾಡಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಗೋಲ್ಮಾಲ್ – ಏನಿದು ಹಗರಣ? ಅಕ್ರಮ ಹಣ ವರ್ಗಾವಣೆ ಆಗಿದ್ದು ಯಾಕೆ?

ಭದ್ರತಾ ಸಿಬ್ಬಂದಿ ಒದಗಿಸುವ ಸೆಕ್ಯೂರಿಟಿ ಏಜೆನ್ಸಿ ಮೂಲಕ ಶಿಕ್ಷಕರ ನೇಮಕಾತಿ ಮಾಡಿಕೊಂಡರೆ ಬಿಬಿಎಂಪಿ ಶಾಲಾ ಕಾಲೇಜ್‌ಗಳಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿರುತ್ತದೆ ಎಂಬ ಭಾರೀ ಪ್ರಶ್ನೆ ಎದ್ದಿತ್ತು. ಅಷ್ಟೇ ಅಲ್ಲದೇ ಸೆಕ್ಯೂರಿಟಿ ಏಜೆನ್ಸಿ ಮೂಲಕವೇ ಶಿಕ್ಷಕಕರಿಗೆ ಸಂಬಳ ನೀಡಲಾಗುವುದು ಷರತ್ತು ವಿಧಿಸಲಾಗಿತ್ತು.

ಗುತ್ತಿಗೆ ರದ್ದಾದ ಕಾರಣ ಬಿಬಿಎಂಪಿಯಿಂದಲೇ ನೇರವಾಗಿ ಶಿಕ್ಷಕರಿಗೆ ಸಂಬಳ ಸಿಗಲಿದೆ. ಇನ್ನು ಮುಂದೆ  ಸರ್ಕಾರದ ಮೂಲಕವೇ ಕೌನ್ಸಿಲಿಂಗ್‌ ಮಾಡಿ ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ನಡೆಯಲಿದೆ.

ಭಾರೀ ವಿರೋಧ ವ್ಯಕ್ತವಾಗಿತ್ತು:
ಬಿಬಿಎಂಪಿಯ ಈ ಪ್ರಕ್ರಿಯೆಗೆ ಸುಮಾರು 700ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರು ವಿರೋಧ ವ್ಯಕ್ತಪಡಿಸಿದ್ದರು. ಶಾಲೆ ಬಹಿಷ್ಕರಿಸಿ ಪ್ರತಿಭಟಿಸಿದ್ದರು. ಆದರೂ, ಇದಕ್ಕೆ ಮಣಿಯದ ಸರ್ಕಾರ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರು, ಬಿಬಿಎಂಪಿ ಶಾಲೆಯಲ್ಲಿ ಅನರ್ಹ ಶಿಕ್ಷಕರಿದ್ದಾರೆ. ಅವರೆಲ್ಲ ಬೇಡ. ಶಿಕ್ಷಣ ಇಲಾಖೆಯಿಂದಲೇ ಶಿಕ್ಷಕರು ಬರುತ್ತಾರೆ. ಈಗಿರುವವರು ಅರ್ಹತೆ ಇದ್ದರೆ ಎಸ್‌ಡಿಎಂಸಿ ಮೂಲಕ ನೇಮಕವಾಗಬಹುದು. ಅವರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದರು.