ಏಪ್ರಿಲ್ 20ರ ಬಳಿಕ ಬೆಂಗ್ಳೂರಿನಲ್ಲಿ ಐಟಿ ಕಂಪನಿಗಳು ಓಪನ್ – ಪಾಸ್ ವ್ಯವಸ್ಥೆ ರದ್ದು

ಬೆಂಗಳೂರು: ಕೇಂದ್ರ ಸರ್ಕಾರದಿಂದ ಏಪ್ರಿಲ್ 20ರ ಬಳಿಕ ಕೆಲ ವಲಯಗಳಿಗೆ ರಿಲ್ಯಾಕ್ಸೇಷನ್ ನೀಡಲಿರುವ ಹಿನ್ನೆಲೆ ಶೇ. 50ರಷ್ಟು ಉದ್ಯೋಗಿಗಳನ್ನು ಬಳಸಿಕೊಂಡು ಐಟಿ ಕಂಪನಿಗಳು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಸುಳಿವು ನೀಡಿದ್ದಾರೆ.

ಐಟಿ ಉದ್ಯೋಗಿಗಳ ಓಡಾಟಕ್ಕೆ ಪಾಸ್ ಉದ್ಭವ ಆಗೋದಿಲ್ಲ. ಶೇ. 50ರಷ್ಟು ಐಟಿ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ. ಆದರೆ ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಂಪನಿಗಳಲ್ಲಿ ಥರ್ಮಲ್ ಟೆಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಐಟಿ ಕಂಪನಿಗಳು ಬಸ್ ವ್ಯವಸ್ಥೆ ಕೇಳಿದ್ರೆ ಮಾತ್ರ ಬಿಎಂಟಿಸಿ ಬಸ್ ಕಾಂಟ್ರೆಕ್ಟ್ ಪಡೆದು ಸೆನಿಟೈಸ್ ಮಾಡಿದ ಬಸ್ ಐಟಿ ಕಂಪನಿಗಳಿಗೆ ನೀಡುತ್ತೇವೆ. ಒಟ್ಟಾರೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಈಗಾಗಲೇ ಲಾಕ್‍ಡೌನ್ ಜಾರಿಯಲ್ಲಿದೆ. ಆದರೆ ಇದು ಎಷ್ಟು ದಿನ ಇರಲಿದೆ ಎನ್ನೋದು ಗೊತ್ತಿಲ್ಲ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವು ಕೆಲಸ ಕಾರ್ಯ ಆರಂಭಿಸಬೇಕಿದೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ಏಪ್ರಿಲ್ 20ರ ಬಳಿಕ ಜನರ ಓಡಾಟಕ್ಕೆ ಪಾಸ್ ಇರೋದಿಲ್ಲ. ಆದ್ರೆ ಲಾಕ್‍ಡೌನ್ ಯಥಾಪ್ರಕಾರ ಇರುತ್ತದೆ. ಯಾವ ಯಾವ ಆಫೀಸ್‍ಗಳು ತೆರೆಯಬೇಕೋ ಅದು ತೆರೆಯುತ್ತದೆ. ಸಾರ್ವಜನಿಕ ಸಾರಿಗೆ ಸೇವೆ ಇರುವುದಿಲ್ಲ. ಈಗಾಗಲೇ ಕೇಂದ್ರದ ಮಾರ್ಗಸೂಚಿಯಲ್ಲಿ ಯಾವ ವಾಹನದಲ್ಲಿ ಎಷ್ಟು ಮಂದಿ ಓಡಾಡಬೇಕು ಎನ್ನುವ ನಿಯಮವನ್ನು ತಿಳಿಸಲಾಗಿದೆ. ಅಲ್ಲದೇ ಅನುಮತಿ ಇರದ ಕಚೇರಿಗಳು, ಮಾಲ್‍ಗಳು ತೆರೆಯುವಂತಿಲ್ಲ. ಹೀಗಾಗಿ ಏಪ್ರಿಲ್ 20ರ ಬಳಿಕ ಪಾಸ್‍ಗಳು ಅವಶ್ಯಕತೆ ಇರಲ್ಲ ಎಂದು ಡಿಸಿಎಂ ಹೇಳಿದ್ದಾರೆ.

ರ‍್ಯಾಪಿಡ್ ಟೆಸ್ಟ್ ಕಿಟ್ ಬಗ್ಗೆ ಪ್ರತಿಕ್ರಿಯಿಸಿ, ಮೊದಲ ಹಂತದಲ್ಲಿ 2 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್ ಆರ್ಡರ್ ಮಾಡಿದ್ದೀವಿ. ಏಪ್ರಿಲ್ ಅಂತ್ಯಕ್ಕೆ ಕಿಟ್‍ಗಳು ಲಭ್ಯವಾಗಲಿದೆ. ರ‍್ಯಾಪಿಡ್ ಟೆಸ್ಟ್ ಕಿಟ್ ಚೀನಾದಿಂದ ಬರಬೇಕಿದೆ. ಈ ತಿಂಗಳ ಅಂತ್ಯಕ್ಕೆ ಒಂದಿಷ್ಟು ಕಿಟ್ ಬರಲಿದೆ, ಬಳಿಕ ಬಾಕಿ ಉಳಿದ ಕಿಟ್ ಬರುತ್ತದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *