ಅಮಿತ್ ಶಾ ಡ್ರಿಲ್ಲಿಂಗ್ ಸಭೆಯಿಂದ ರಾಜ್ಯ ಬಿಜೆಪಿ ನಾಯಕರು ಸುಸ್ತಾಗಿದ್ರಾ: ಆರ್ ಅಶೋಕ್ ಉತ್ತರಿಸಿದ್ದು ಹೀಗೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರಾಜ್ಯ ಭೇಟಿ ಬಿಜೆಪಿ ಮುಖಂಡರಿಗೆ ಸುಸ್ತಾಗಿದೆ ಅನ್ನೋದು ಸುಳ್ಳು. ಇದರಿಂದ ನಾವು ಮತ್ತಷ್ಟು ಆ್ಯಕ್ಟೀವ್ ಆಗಿದ್ದೇವೆ ಅಂತ ಬಿಜೆಪಿ ಮುಖಂಡ ಆರ್ ಅಶೋಕ್ ಹೇಳಿದ್ದಾರೆ.

ಅವರು ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಮಿತ್ ಶಾ ರಾಜ್ಯ ಭೇಟಿ ಹೊಸ ಸಂಚಲನ ಉಂಟು ಮಾಡಿದೆ. ಚುನಾವಣಾ ರಣಕಹಳೆ ಮೊಳಗಿಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತವಾದರೆ ಇಡೀ ದೇಶದಲ್ಲಿ ಮುಕ್ತವಾದಂತೆ. ಕಾಂಗ್ರೆಸ್ ಪಕ್ಷ ಕೋಮಾದಲ್ಲಿದೆ. ಬಿಜೆಪಿ ನಡೆಗೆ ಮತ್ತು ಅಮಿತ್ ಶಾ ಇಟ್ಟ ಹೆಜ್ಜೆಗೆ ಕಾಂಗ್ರೆಸ್‍ನಲ್ಲಿ ಭೂಕಂಪವಾಗಿದೆ ಎಂದರು.

ಅಮಿತ್ ಶಾ ಭೇಟಿಯ ಮೊದಲನೇ ದಿನವೇ ಎರಡು ಬಾರಿ ಕೋರ್ ಕಮಿಟಿ ಸಭೆ ನಡೆಸಿದ್ದು, ಭಾನುವಾರವೂ ರಾಜ್ಯ ಬಿಜೆಪಿ ನಾಯಕರು ಹಾಗೂ ಕೋರ್ ಕಮಿಟಿ ಸದಸ್ಯರ ಸಭೆ ನಡೆಸಿದ್ದಾರೆ. ಮಲ್ಲೇಶ್ವರಂ ನಲ್ಲಿರೋ ಬಿಜೆಪಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ನಾಯಕರಿಗೆ ಮಾರ್ಗದರ್ಶನ ನೀಡಿದ್ದರು.

ಭಾನುವಾರ ರಾತ್ರಿ 11 ಗಂಟೆಗೆ ಆರಂಭವಾದ ಸಭೆ ಮುಕ್ತಾಯವಾಗಿದ್ದು ಮಧ್ಯರಾತ್ರಿ 12 ಗಂಟೆಗೆ. ಅಂದು ಬೆಳಗ್ಗೆ 8.30ರಿಂದ ಅಮಿತ್ ಶಾ ಆದಿಚುಂಚನಗಿರಿ ಮಠದಲ್ಲಿ ನಡೆದ ಕಾರ್ಯಕ್ರಮ, ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಆಯೋಜನೆಗೊಂಡಿದ್ದ ಸತ್ಸಂಗದಲ್ಲಿ ಭಾಗವಹಿಸಿದ್ದರು. ಹೀಗೆ ಸತತವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರೂ ಮಧ್ಯರಾತ್ರಿ 12 ಗಂಟೆ ಆದ್ರೂ ದಣಿದಿರಲಿಲ್ಲ. ಆದ್ರೆ ಕೋರ್ ಕಮಿಟಿ ಸಭೆಯಲ್ಲಿ ಸದಸ್ಯರ ದಣಿದ ಮುಖ ನೋಡಿದ ಶಾ ಅವರೇ ಸಭೆಯನ್ನು ನಿಲ್ಲಿಸಿದರು ಎಂಬುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿತ್ತು.

ಒಟ್ಟಿನಲ್ಲಿ ಶಾ ಅವರು ವಿಶ್ರಾಂತಿ ಇಲ್ಲದೇ ಅತ್ಯಂತ ಚಟುವಟಿಕೆಯಿಂದ ಕೂಡಿದ್ದನ್ನು ಕಂಡ ರಾಜ್ಯ ಬಿಜೆಪಿ ನಾಯಕರು ಅಚ್ಚರಿಯಾಗಿದ್ದು ಅಲ್ಲದೇ ಸುಸ್ತಾಗಿ ಹೋಗಿದ್ದರು ಎಂಬ ಮಾತುಗಳು ಕೇಳಿಬಂದಿತ್ತು.

ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಬಿಎಸ್ ಯಡಿಯೂರಪ್ಪ, ಅಮಿತ್ ಶಾ ಎಡವಟ್ಟು!

 

Comments

Leave a Reply

Your email address will not be published. Required fields are marked *