6 ವರ್ಷಗಳ ನಂತರ ಪಾಕಿಸ್ತಾನದ ಜೈಲಿನಿಂದ ಯುವಕ ವಾಪಸ್!

ಜೈಪುರ: ಆರು ವರ್ಷಗಳ ಕಾಲ ಪಾಕಿಸ್ತಾನದ ಕರಾಚಿ ಜೈಲಿನಲ್ಲಿದ್ದ ರಾಜಸ್ಥಾನದ ಬುಂಡಿ ಜಿಲ್ಲೆಯ ಯುವಕ ಭಾರತಕ್ಕೆ ಮರಳಿದ್ದಾನೆ.

ತನಗೆ ಗೊತ್ತಿಲ್ಲದೆ ಜೂಗ್ರಾಜ್ ಭೀಲ್ ಪಾಕಿಸ್ತಾನದ ಗಡಿಭಾಗವನ್ನು ದಾಟಿದ್ದ ಕಾರಣ ಆತನನ್ನು ಬಂಧಿಸಲಾಗಿತ್ತು. ಆರು ವರ್ಷದ ಜೈಲುವಾಸದ ನಂತರ ರಾಜಸ್ಥಾನದ ಬುಂಡಿ ಜಿಲ್ಲೆಯಾ ರಾಮ್‍ಪುರಿಯಗೆ ವಾಪಸ್ ಬಂದಿದ್ದಾನೆ.

ಆರು ವರ್ಷಗಳ ಹಿಂದೆ ಕಾಡಿನಲ್ಲಿರುವ ರಾಮದೇವರ ಪ್ರಾರ್ಥನೆಗೆ ಎಂದು ಜೂಗ್ರಾಜ್ ಭೀಲ್ ಹೋಗಿದ್ದ. ದೇವಾಲಯದ ದರ್ಶನ ಮುಗಿಸಿ ಕಾಡಿನಿಂದ ವಾಪಸ್ ಬರುವಾಗ ದಾರಿ ತಪ್ಪಿ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾನೆ. ಆ ಸಂದರ್ಭದಲ್ಲಿ ಪಾಕ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಕಳೆದ ವರ್ಷದ ಜೂನ್ ತಿಂಗಳವರೆಗೆ ಆತ ಎಲ್ಲಿದ್ದಾನೆ ಎಂಬ ಸುಳಿವು ಸಿಕ್ಕಿರಲಿಲ್ಲ. ಆದರೆ ಅವನು ಪಾಕಿಸ್ತಾನದ ಕರಾಚಿ ಜೈಲಿನಲ್ಲಿ ಇದ್ದಾನೆ ಎಂದು ತಿಳಿದ ಬುಂಡಿ ಜಿಲ್ಲೆಯ ಸ್ಥಳೀಯರು ಕೇಂದ್ರ ಸರ್ಕಾರಕ್ಕೆ ಆತನನ್ನು ಬಿಡುಗಡೆ ಮಾಡಿಸುವಂತೆ ಒತ್ತಾಯ ಮಾಡಿದ್ದರು.

ಅದರಂತೆ ಭಾರತ ಸರ್ಕಾರ ಜೂಗ್ರಾಜ್‍ನನ್ನು ಬಿಡುಗಡೆ ಮಾಡಿಸಿದೆ. ಸಾಮಾಜಿಕ ಕಾರ್ಯಕರ್ತ ಧರ್ಮೇಶ್ ಯಾದವ್ ಮತ್ತು ಜೂಗ್ರಾಜ್ ಭೀಲ್ ಅಣ್ಣ ಬಾಬುಲಾಲ್ ಭೀಲ್ ಅವರು ವಾಘಾ ಗಡಿಯಿಂದ ಆತನನ್ನು ಕರೆದುಕೊಂಡು ಬಂದಿದ್ದಾರೆ.

ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಧರ್ಮೇಶ್ ಯಾದವ್ ಅವರು, ವಾಘಾ ಗಡಿಗೆ ಬಂದ ಜೂಗ್ರಾಜ್ ಕೇವಲ ಅಣ್ಣನನ್ನು ಮಾತ್ರ ಗುರುತಿಸಿದ್ದ. ಆತ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮನೆಗೆ ಬಂದು 2 ದಿನವಾದರೂ ಒಂದು ಮಾತನ್ನು ಮಾತನಾಡಿರಲಿಲ್ಲ. ಈಗ ಸ್ವಲ್ಪ ಸುಧಾರಿಸಿದ್ದಾನೆ. ಆತ ಕ್ಷೇಮವಾಗಿ ಮರಳಿ ಬಂದಿರುವುದು ದೇವರ ಆಶೀರ್ವಾದ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *