6 ದಶಕಗಳ ನಂತ್ರ ಸಿಕ್ತು ಸರ್ಕಾರಿ ಮನೆ – ಕುಟುಂಬ ಸಮೇತರಾಗಿ ಗೃಹ ಪ್ರವೇಶ ಮಾಡಿದ ಮಾಜಿ ಪ್ರಧಾನಿ

ಹಾಸನ: ಹೆಚ್ಚು ಕಡಿಮೆ 6 ದಶಕಗಳ ಕಾಲ ರಾಜಕೀಯ ಹಾದಿ ಸವೆಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಈಗಷ್ಟೇ ತವರು ಜಿಲ್ಲೆಯಲ್ಲಿ ಸರ್ಕಾರಿ ಮನೆ ಸಿಕ್ಕಿದೆ.

ಹಾಸನದ ಎಸ್‍ಪಿ ಕಚೇರಿ ಪಕ್ಕದಲ್ಲಿ ಸರ್ಕಾರದ ಕಡೆಯಿಂದ ವಿಶಾಲ ಮನೆಯೊಂದನ್ನು ನಿರ್ಮಿಸಲಾಗಿದ್ದು, ಗೌಡರು ಕುಟುಂಬ ಸಮೇತರಾಗಿ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. 1960ರ ದಶಕದಲ್ಲಿ ಸಕ್ರೀಯ ರಾಜಕೀಯದಲ್ಲಿರುವ ಗೌಡರು, ಬಾಡಿಗೆ ಮನೆ, ಸರ್ಕಾರಿ ಪ್ರವಾಸಿ ಮಂದಿರದಲ್ಲೇ ಹೆಚ್ಚು ದಿನ ಕಳೆದಿದ್ದರು.

ಇತ್ತೀಚೆಗೆ ಪುತ್ರ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೊಳೆನರಸೀಪುರದಲ್ಲಿ ಸ್ವಂತ ಮನೆ ಕಟ್ಟಿದ ನಂತರ ಬೆಂಗಳೂರಿಂದ ಬಂದ ಎಷ್ಟೋ ವೇಳೆ ದೇವೇಗೌಡರು ಹೊಳೆನರಸೀಪುರದ ಮಗನ ಮನೆಯಲ್ಲಿ ಉಳಿಯುತ್ತಿದ್ದರು. ಇಷ್ಟು ವರ್ಷಗಳ ನಂತರ ರಾಜ್ಯ ಸರ್ಕಾರ ಮಾಜಿ ಪ್ರಧಾನಿಗೆ ಸರ್ಕಾರ ಮನೆಯೊಂದನ್ನು ನೀಡಿದೆ.

ದೈವದಲ್ಲಿ ಅಪಾರ ನಂಬಿಕೆ ಹೊಂದಿರುವ ಗೌಡರಿಗೆ ಎಲ್ಲಾ ರೀತಿಯಲ್ಲೂ ಸರಿ ಹೊಂದುವ ರೀತಿಯಲ್ಲಿ ಹೊಸ ಮನೆ ನಿರ್ಮಾಣ ಮಾಡಲಾಗಿದೆ. ಪ್ರಮುಖವಾಗಿ ದೇವರ ಮನೆ, ಅಡುಗೆಮನೆ, ಮೊದಲ ಅಂತಸ್ತಿನಲ್ಲಿರುವ ರೂಂ ಪ್ರವೇಶಕ್ಕೆ ಲಿಫ್ಟ್, ವಿಶ್ರಾಂತಿ ಕೊಠಡಿ ಸೇರಿದಂತೆ ಎಲ್ಲಾ ಸೌಲಭ್ಯಗಳು ಇಲ್ಲಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೌಡರು, ನಾನು ಎಷ್ಟು ವರ್ಷ ಇರುತ್ತೇನೋ ಗೊತ್ತಿಲ್ಲ. ಇನ್ನೂ ಒಂದೂವರೆ ವರ್ಷ ಸಂಸದನಾಗಿರುತ್ತೇನೆ. ಅಲ್ಲಿವರೆಗೂ ಇಲ್ಲೇ ಉಳಿದು ಜನರ ಕುಂದು ಕೊರತೆ ಆಲಿಸುವುದಾಗಿ ತಿಳಿಸಿದ್ದಾರೆ. ದೇವೇಗೌಡರು ಇಲ್ಲೇ ತಂಗುವುದರಿಂದ ನಮ್ಮ ಸಮಸ್ಯೆಗಳನ್ನು ನೇರವಾಗಿ ಬಂದು ಹೇಳಿಕೊಳ್ಳಬಹುದಾಗಿದೆ.

Comments

Leave a Reply

Your email address will not be published. Required fields are marked *