40 ವರ್ಷದ ನಂತ್ರ ಸಿಕ್ತು ಅದೃಷ್ಟ: ಕಾರವಾರ ಮೀನುಗಾರರಿಗೆ ಹೊಡೆಯಿತು ಬಂಪರ್ ಮೀನಿನ ಲಾಟರಿ

ಕಾರವಾರ: ಒಂದೆಡೆ ದಡದ ಬಳಿ ತೇಲಿ ಬಂದ ಲಕ್ಷಾಂತರ ಮೀನುಗಳನ್ನು ಹೆಕ್ಕಿ ಚೀಲಕ್ಕೆ ತುಂಬುತ್ತಿರುವ ಜನರು. ಇನ್ನೊಂದೆಡೆ ಸಮುದ್ರಕ್ಕೆ ಬಲೆ ಹಾಕಿ ಟನ್ ಗಟ್ಟಲೇ ಮೀನನ್ನು ಬಾಚುತ್ತಿರುವ ಮೀನುಗಾರರು. ಒಟ್ಟಿನಲ್ಲಿ ರವೀಂದ್ರನಾಥ ಟಾಗೋರ್ ಬೀಚಿನ ದಡಕ್ಕೆ ಲಕ್ಷಾಂತರ ಮೀನುಗಳು ಬರುವ ಮೂಲಕ ಮೀನುಗಾರಿಗೆ ಮೀನಿನ ಲಾಟರಿ ಹೊಡೆದಿದೆ.

ಹೌದು. ನಲವತ್ತು ವರ್ಷಗಳ ನಂತರ ಹವಾಮಾನ ವೈಪರಿತ್ಯದಿಂದಾಗಿ ಕಾರವಾರದ ರವೀಂದ್ರನಾಥ ಟಾಗೋರ್ ಕಡಲ ತೀರದ ಬಳಿ ವಿವಿಧ ಜಾತಿಯ ಮೀನುಗಳು ಬಂದಿವೆ. ಹೀಗಾಗಿ ತಿಂಗಳುಗಟ್ಟಲೆ ಆಳ ಸಮುದ್ರದಲ್ಲಿ ಮೀನು ಹಿಡಿಯಲು ಹೋಗುತ್ತಿದ್ದ ಮೀನುಗಾರರು ಸಮುದ್ರ ತೀರದಲ್ಲಿ ಬಲೆ ಹಾಕಿ ಟನ್‍ಗಟ್ಟಲೇ ಮೀನನ್ನು ಹಿಡಿದರೆ, ಸ್ಥಳೀಯ ಜನರು ನೀರಿನಲ್ಲಿ ತೇಲಿ ಬಂದ ಮೀನನ್ನು ಚೀಲದ ತುಂಬ ತುಂಬಿಕೊಂಡು ಸಂಭ್ರಮಪಡುತ್ತಿದ್ದಾರೆ.

ವಿವಿಧ ಜಾತಿಯ ಮೀನುಗಳು ಕಡಲ ತೀರದ ಬಳಿ ಬರುವ ಮೂಲಕ ಕಾರವಾರದ ಮೀನು ಪ್ರಿಯರಿಗೆ ಸಂತಸ ತಂದಿದೆ. ಇನ್ನು ಮೀನುಗಾರರು ಕೂಡ ದಡದ ಬಳಿ ಬಲೆ ಹಾಕಿ ದೋಡಿ, ಪೇಡಿ ಮುಂತಾದ ಮೀನುಗಳ ಜೊತೆಗೆ ಪಾಪ್ಲೆಟ್, ಸಿಗಡಿ, ಟೈಗರ್ ಫಿಷ್ ಮುಂತಾದ ದುಬಾರಿ ಮೀನುಗಳನ್ನು ಲೋಡ್‍ಗಟ್ಟಲೇ ಹಿಡಿದಿದ್ದು ಕೈ ತುಂಬಾ ಲಾಭದ ನಿರೀಕ್ಷೆಯಲ್ಲಿದ್ದಾರೆ.

ದೇಶದಲ್ಲೆಡೆ ಜನರು ವಿಜಯದಶಮಿಯ ಸಂಭ್ರಮದಲ್ಲಿದ್ದಾರೆ. ಆದರೆ ಕಾರವಾರದ ಜನರಿಗೆ ಮಾತ್ರ ತಾನಾಗಿಯೇ ಒಲಿದು ಬಂದ ಮೀನುಗಳ ಭೇಟೆಯಲ್ಲಿ ನಿರತರಾಗಿದ್ದು, ಚೀಲದ ತುಂಬಾ ಮೀನು ತುಂಬಿ ಕೈತುಂಬ ಲಕ್ಷ್ಮಿ ಎಣಿಸುತ್ತಾ ಖುಷಿಯಲ್ಲಿದ್ದಾರೆ.

Comments

Leave a Reply

Your email address will not be published. Required fields are marked *