ನಾಲ್ಕು ಬಾರಿ ಸಿಎಂ ನಂತರ ಬಿಎಸ್‍ವೈ ಮತ್ತೊಂದು ದಾಖಲೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿದ್ದು, ನಾಲ್ಕು ಬಾರಿ ಸಿಎಂ ಆದ ದಾಖಲೆ ನಂತರ ಇದೀಗ ಮತ್ತೊಂದು ದಾಖಲೆಗೆ ಪಾತ್ರರಾಗುತ್ತಿದ್ದಾರೆ.

ಈ ಹಿಂದೆ 2007ರಲ್ಲಿ 7 ದಿನ, 2018ರಲ್ಲಿ 3ದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಈಗ ಕ್ಯಾಬಿನೆಟ್ ಇಲ್ಲದೆ ಸ್ವಾತಂತ್ರೋತ್ಸವ ಆಚರಣೆ ಮಾಡುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ.

ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ಯಾಬಿನೆಟ್ ಇಲ್ಲದೆ ಮುಖ್ಯಮಂತ್ರಿಗಳು ಸ್ವಾತಂತ್ರೋತ್ಸವ ಆಚರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ರಾಜ್ಯದ ಜನರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದರೆ, ಅದೇ ರೀತಿ ಆಯಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ ಜಿಲ್ಲೆಯ ಅಭಿವೃದ್ಧಿ ಕುರಿತು ಹಾಗೂ ಕಾರ್ಯಕ್ರಮಗಳ ಕುರಿತು ಭಾಷಣ ಮಾಡುತ್ತಿದ್ದರು. ಆದರೆ, ಈ ಬಾರಿ ಮುಖ್ಯಮಂತ್ರಿಗಳನ್ನು ಹೊರತು ಪಡಿಸಿ ಯಾವುದೇ ಸಚಿವರು ಇಲ್ಲ ಕಾರಣ, ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.

ರಾಷ್ಟ್ರಪತಿ ಅಳ್ವಿಕೆ ಇದ್ದಾಗ ಮಾತ್ರ ಜಿಲ್ಲಾಧಿಕಾರಿಗಳು ಧ್ವಜ ಹಾರಿಸಲು ಅನುಮತಿ ಇತ್ತು. ಈ ಬಾರಿ ಸರ್ಕಾರವಿದ್ದರೂ ಸಹ ಸಚಿವ ಸಂಪುಟ ರಚನೆಯಾಗದ ಕಾರಣ ಜಿಲ್ಲಾಧಿಕಾರಿಗಳೇ ಆಯಾ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಲಿದ್ದಾರೆ. ಹೀಗಾಗಿ ಪ್ರಪ್ರಥಮ ಬಾರಿಗೆ ಇಂಥಹದ್ದೊಂದು ಸ್ಥಿತಿಗೆ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಸಾಕ್ಷಿಯಾಗಿದೆ.

ಸಂಪುಟ ರಚನೆ ಕುರಿತು ಕೇಂದ್ರ ನಾಯಕರು ಸ್ಪಷ್ಟಪಡಿಸಿದ್ದು, ಸ್ವಾತಂತ್ರ್ಯ ದಿನಾಚರಣೆ ನಂತರವೇ ಸಚಿವ ಸಂಪುಟ ರಚನೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ. ಹೀಗಾಗಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

Comments

Leave a Reply

Your email address will not be published. Required fields are marked *