370 ರೂ. ಕಳ್ಳತನ: 29 ವರ್ಷಗಳ ವಿಚಾರಣೆ ಬಳಿಕ ತೀರ್ಪು- ಶಿಕ್ಷೆ ಏನು ಗೊತ್ತಾ?

ಬರೇಲಿ: 1988ರಲ್ಲಿ ರೈಲಿನಲ್ಲಿ ವ್ಯಕ್ತಿಯೊಬ್ಬರಿಂದ 370 ರೂ. ಹಣ ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷಗಳ ವಿಚಾರಣೆ ಬಳಿಕ ಬರೇಲಿ ಕೋರ್ಟ್ ಇಬ್ಬರು ಕಳ್ಳರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಬರೇಲಿಯ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಮಂಗಳವಾರದಂದು ತೀರ್ಪು ಪ್ರಕಟಿಸಿದ್ದು, ಕಳ್ಳರಿಗೆ 5 ವರ್ಷ ಜೈಲು ಜೊತೆಗೆ ತಲಾ 10 ಸಾವಿರ ರೂ ದಂಡ ವಿಧಿಸಿದೆ. ಈ ಪ್ರಕರಣದ ಮೂರನೇ ಆರೋಪಿ 2004ರಲ್ಲಿ ಸಾವನ್ನಪ್ಪಿದ್ದಾನೆ.

ಏನಿದು ಪ್ರಕರಣ: 1988ರ ಅಕ್ಟೋಬರ್ 21ರಂದು ಚಂದ್ರ ಪಾಲ್, ಕನ್ಹಯ್ಯ ಲಾಲ್ ಹಾಗು ಸರ್ವೇಶ್ ಎಂಬ ಮೂವರು ರೈಲಿನಲ್ಲಿ ಪ್ರಯಾಣಿಸುತ್ತಿದ್ರು. ಇದೇ ರೈಲಿನಲ್ಲಿ ವಾಜಿದ್ ಹುಸೇನ್ ಎಂಬ ವ್ಯಕ್ತಿ ಕೆಲಸಕ್ಕಾಗಿ ಪಂಜಾಬ್‍ನಿಂದ ಶಹಜಹಾನ್‍ಪುರ್‍ಗೆ ಹೋಗುತ್ತಿದ್ರು. ಈ ಮೂವರು ವಾಜಿದ್ ಅವರಿಗೆ ಟೀನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕೊಟ್ಟು ನಂತರ ವಾಜಿದ್ ಜೇಬಿನಲ್ಲಿದ್ದ 370 ರೂಪಾಯಿಯನ್ನು ಕದ್ದಿದ್ದರು.

ಮೂವರ ವಿರುದ್ಧ ಐಪಿಸಿ ಸೆಕ್ಷನ್ 379(ಕಳ್ಳತನ), 328(ವಿಷಯುಕ್ತ ಸಾಮಗ್ರಿಯಿಂದ ಹಾನಿ ಉಂಟುಮಾಡುವುದು) ಹಾಗೂ 411(ಅಪ್ರಾಮಾಣಿಕತೆ) ಅಡಿಯಲ್ಲಿ ಎಫ್‍ಐಆರ್ ದಾಖಲಾಗಿತ್ತು. 2004ರಲ್ಲಿ ಆರೋಪಿ ಪಾಲ್ ಮೃತಪಟ್ಟಿರುವುದು ಗೊತ್ತಾಗಿತ್ತು. ನಂತರ ಕನ್ಹಯ್ಯ ಹಾಗೂ ಸರ್ವೇಶ್ ವಿರುದ್ಧ ಈ ಪ್ರಕರಣವನ್ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಆರೋಪಿ ಪಾಲ್ 16 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ಕೌನ್ಸೆಲ್ ಸುರೇಶ್ ಬಾಬು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಸದ್ಯ 59 ವರ್ಷ ವಯಸ್ಸಿನ ವಾಜಿದ್ ಹುಸೇನ್ ಅವರು 2012ರಲ್ಲಿ ಆರೋಪಿಗಳ ವಿರುದ್ಧ ಹೇಳಿಕೆ ನೀಡಲು ಕೋರ್ಟ್‍ಗೆ ಬಂದಿದ್ದರು. ಕನ್ಹಯ್ಯ ಲಾಲ್ ಹಾಗೂ ಸರ್ವೇಶ್‍ಗೆ ಸುಮಾರು 60 ವರ್ಷ ವಯಸ್ಸಾಗಿದ್ದು ಇಬ್ಬರಿಗೂ ಬೆಳದು ನಿಂತ ಮಕ್ಕಳಿದ್ದಾರೆ. ಯುವಕರಾಗಿದ್ದಾಗ ಏನೋ ತಪ್ಪು ಮಾಡಿಬಿಟ್ಟೆವು ಅಂತ ಈಗ ಪಶ್ಚಾತ್ತಾಪ ಪಡ್ತಿದ್ದಾರೆ. ಈಗ ನೀಡಲಾಗಿರೋ ಜೈಲು ಶಿಕ್ಷೆಗಿಂತ ವಿಚಾರಣೆ ವೇಳೆಯೇ ನಮಗೆ ನಿಜವಾದ ಶಿಕ್ಷೆ ಸಿಕ್ಕಿದೆ ಅಂತ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *