ಅಫ್ಘಾನಿಸ್ತಾನದ ಪಂಜಶೀರ್ ವಶಪಡಿಸಿಕೊಂಡ ತಾಲಿಬಾನ್

ಕಾಬೂಲ್: ತಾಲಿಬಾನ್ ಪಂಜ್‍ಶೀರ್ ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ಪಂಜ್‍ಶೀರ್ ಪ್ರಾಂತ್ಯದ ಹೋರಾಟಗಾರರ ನ್ಯಾಶನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ಪಡೆ ನೀಡಿದ್ದ ಕದನ ವಿರಾಮ ಕರೆಯನ್ನು ತಾಲಿಬಾನ್ ತಿರಸ್ಕರಿಸಿದೆ ಎಂದು ವರದಿಯಾಗಿದೆ.

ತಾಲಿಬಾನ್ ಅದಾಗಲೇ ತಾವು ಪಂಜ್‍ಶೀರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ವಶಕ್ಕೆ ಪಡಿಸಿಕೊಂಡಿದ್ದೇವೆ ಎಂದು ಪ್ರತಿಪಾದಿಸಿದೆ. ಯುದ್ಧ ಮಾಡುವುದೇನೂ ಇಲ್ಲ. ಪಂಜ್‍ಶೀರ್ ನಮ್ಮ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದ್ದಲ್ಲದೆ, ಪಂಜಶಿರ್ ಪ್ರಾಂತ್ಯದ ಗವರ್ನರ್ ಕಚೇರಿ ಮೇಲೆ ತಾಲಿಬಾನ್ ಧ್ವಜ ಹಾರಿಸಿದ್ದಾಗಿ ಸ್ಥಳೀಯ ನ್ಯೂಸ್ ವರದಿ ಮಾಡಿದೆ.

ತಾಲಿಬಾನಿಗಳ ಹೇಳಿಕೆಯನ್ನು ಸ್ಥಳೀಯ ಹೋರಾಟ ಪಡೆಗಳು ಅಲ್ಲಗಳೆದಿದ್ದವು. ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಾಲೇಹ್ ಆಪ್ತವಲಯದ ಪ್ರತಿನಿಧಿಯೊಬ್ಬರು ಮಾತನಾಡಿ, ಪಂಜ್‍ಶೀರ್ ನಮ್ಮ ವಶದಲ್ಲೇ ಇದೆ. ಇಲ್ಲಿನ ಗುಡ್ಡಗಾಡುಗಳೆಲ್ಲ ನಮ್ಮ ಜನರೇ ಇದ್ದಾರೆ. ಆದರೆ ತಾಲಿಬಾನ್ ಪಾಕಿಸ್ತಾನದ ಡ್ರೋನ್ ನೆರವಿನಿಂದ ಬಾಂಬ್ ದಾಳಿ ನಡೆಸುತ್ತಿದೆ ಎಂದು ಹೇಳಿದ್ದರು. ಇದನ್ನೂ ಓದಿ:  ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠಕ್ಕೆ ಸುಧಾಮೂರ್ತಿ ಭೇಟಿ

ಹೋರಾಟ ನಿಲ್ಲಿಸುವುದಿಲ್ಲ ಮತ್ತು ನಮ್ಮ ಸೈನ್ಯವನ್ನು ಪಂಜಶಿರ್ ಕಣಿವೆಯಿಂದ ವಾಪಸ್ ಪಡೆಯುವುದಿಲ್ಲ ಎಂದು ತಾಲಿಬಾನಿ ಗಳು ಹೇಳಿದ್ದಾರೆ. ಪಂಜ್‍ಶೀರ್  ಉಳಿಸಿಕೊಳ್ಳುವ ಹೋರಾಟದಲ್ಲಿ ಎನ್‍ಆರ್‍ಎಫ್ ಪಡೆ ನಿನ್ನೆ ರಾತ್ರಿ ವಕ್ತಾರ ಫಾಹಿಮ್ ದಷ್ಟಿ ಸೇರಿ ಮೂವರು ಪ್ರಮುಖ ನಾಯಕರನ್ನು ಕಳೆದುಕೊಂಡಿದೆ. ಅದರ ಬೆನ್ನಲ್ಲೇ ಸಂಘಟನೆ ಮುಖ್ಯಸ್ಥ ಅಹ್ಮದ್ ಮಸೂದ್ ಕದನ ವಿರಾಮಕ್ಕೆ ಕರೆ ನೀಡಿದ್ದರು. ಶಾಂತಿಯುತ ಮಾತುಕತೆಗೆ ನಾವು ಸಿದ್ಧರಿದ್ದೇವೆ, ತಾಲಿಬಾನ್ ತನ್ನ ಸೈನಿಕರನ್ನು ಹಿಂಪಡೆದರೆ ನಾವೂ ಸುಮ್ಮನಾಗುತ್ತೇವೆ ಎಂದು ಹೇಳಿದ್ದರು. ಆದರೆ ಅಹ್ಮದ್ ಮಸೂದ್ ಮನವಿಯನ್ನು ತಾಲಿಬಾನಿಗಳು ಸಾರಾಸಗಾಟವಾಗಿ ತಿರಸ್ಕರಿಸಿದ್ದಾರೆ.

ಶಾಂತಿ ಮಾತುಕತೆಗೆ ಮುಂದಾದಾಗ ಅಹ್ಮದ್ ಮಸೂದ್ ಅದನ್ನು ಒಪ್ಪದೆ, ಹೋರಾಟ ಮುಂದುವರಿಸಿದ್ದರು. ಈಗ ನಾವ್ಯಾಕೆ ಅವರ ಕದನ ವಿರಾಮ ಮನವಿ ಒಪ್ಪಬೇಕು. ನಮಗೆ ಅಹ್ಮದ್ ಜೊತೆ ಮಾತನಾಡಲು ಏನೂ ಇಲ್ಲ ಎಂದು ತಾಲಿಬಾನಿಗಳು ಸ್ಪಷ್ಟಪಡಿಸಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

Comments

Leave a Reply

Your email address will not be published. Required fields are marked *