‘ಕೈ’ ಕಾರ್ಪೊರೇಟರ್ ಕಿರುಕುಳಕ್ಕೆ ಮಹಿಳಾ ಅಡ್ವೊಕೇಟ್ ಆತ್ಮಹತ್ಯೆ – ತಿಂಗಳಾದ್ರೂ ಆರೋಪಿ ಬಂಧನವಿಲ್ಲ

ಬೆಂಗಳೂರು: ನಗರದ ನಾರಾಯಣಪುರ ವಾರ್ಡ್ ನ ಕಾಂಗ್ರೆಸ್ ಕಾರ್ಪೊರೇಟರ್ ಸುರೇಶ್ ಕಿರುಕುಳಕ್ಕೆ ಮಹಿಳಾ ಅಡ್ವೊಕೇಟ್ ಧರಣಿ ಆತ್ಮಹತ್ಯೆ ಮಾಡಿಕೊಂಡು ತಿಂಗಳಾಗಿದೆ. ಆದರೂ ಇದೂವರೆಗೂ ಕಾರ್ಪೊರೇಟರ್ ನ ಬಂಧನವಾಗಿಲ್ಲ.

ಡಿಸೆಂಬರ್ 31 ರಂದು ಧರಣಿ (25) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇನ್ನೂ ಕಾರ್ಪೊರೇಟರ್ ನನ್ನು ಬಂಧಿಸಲಾಗಿಲ್ಲ.

ಉದಯನಗರದಲ್ಲಿ ಅಡ್ವೊಕೇಟ್ ಧರಣಿ 10*20 ಅಳತೆಯ ಜಾಗದಲ್ಲಿ ತಾಯಿಯ ಜೊತೆ ವಾಸವಾಗಿದ್ದರು. ಧರಣಿ ಮನೆ ರಸ್ತೆಗೆ ಸಮೀಪವಿದ್ದರಿಂದ ಅಕ್ಕಪಕ್ಕದ ಮನೆಯವರು ಕೂಡ ಗಲಾಟೆ ಮಾಡುತ್ತಿದ್ದರು. ಇದೇ ನೆಪದಲ್ಲಿ ಕಾರ್ಪೊರೇಟರ್ ಸುರೇಶ್ ಹಾಗೂ ಬೆಂಗಲಿಗರು ಧರಣಿ ಕುಟುಂಬಸ್ಥರಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಹಲ್ಲೆ ಕೂಡ ಮಾಡಿದ್ದರು ಎಂದು ಮೃತ ಧರಣಿ ತಾಯಿ ಆರೋಪ ಮಾಡಿ ಮಹಾದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಒಟ್ಟು 17 ಜನರ ಮೇಲೆ ಎಫ್‍ಐಆರ್ ಕೂಡ ದಾಖಲಿಸಿಕೊಂಡಿದ್ದರು.

ಮೃತ ಧರಣಿ ಕುಟುಂಬದ ಬೆಂಬಲಕ್ಕೆ ನಿಂತಿದ್ದ ಆಲ್ ಇಂಡಿಯಾ ಅಡ್ವೊಕೇಟರ್ಸ್ ಅಸೋಸಿಯೇಷನ್, ಡಿಜಿಪಿ ನೀಲಮಣಿ ರಾಜು ಹಾಗೂ ಎರಡು ಬಾರಿ ಗೃಹ ಸಚಿವ ಎಂಬಿ ಪಾಟೀಲ್‍ರನ್ನ ಭೇಟಿ ಮಾಡಿ ದೂರು ನೀಡಿದ್ದಾರೆ. ಆದರೂ ಕಾರ್ಪೊರೇಟರ್ ಬಂಧನವಾಗಿಲ್ಲ. ಕಾರ್ಪೊರೇಟರ್ ನ ಬಂಧನಕ್ಕೆ ಪ್ರತಿಭಟನೆ ಮಾಡಿದ್ರೂ ಪೊಲೀಸರು ಕ್ಯಾರೇ ಎಂದಿಲ್ಲ. ಈ ಮೂಲಕ ಪೊಲೀಸರು ರಾಜಕಾರಣಿಗಳ ಜೊತೆ ಸೇರಿಕೊಂಡು ಹಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ತಾಯಿ ಆರೋಪಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *