ತೆರೆಮರೆಯಲ್ಲಿದ್ದ ಖಳನಾಯಕ ಅಧೀರನ ರಗಡ್ ಲುಕ್ ರಿವೀಲ್

ಬೆಂಗಳೂರು: ‘ಕೆಜಿಎಫ್ ಚಾಪ್ಟರ್-2’ ಚಿತ್ರತಂಡ ಇಂದು ಅಧೀರನ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅಧೀರ ಯಾರಾಗಿರುತ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಅಧಿಕೃತವಾಗಿ ಸಿನಿಮಾ ಖಳನಾಯಕ ಅಧೀರನ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ಹೊಂಬಾಳೆ ಫಿಲ್ಮ್ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ರಿಲೀಸ್ ಆಗಿದ್ದು, ಅಧೀರ ಯಾರಾಗುತ್ತಾರೆ ಎಂದು ಮೊದಲೇ ಊಹಿಸಿದ ರೀತಿಯಲ್ಲಿಯೇ ಬಾಲಿವುಡ್ ನಟ ಸಂಜಯ್ ದತ್ ಅವರೇ ಅಧೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂದು ಸಂಜಯ್ ದತ್ ಅವರ ಹುಟ್ಟುಹಬ್ಬವಾಗಿದೆ. ಈ ಪ್ರಯುಕ್ತ ಚಿತ್ರತಂಡ ಅವರ ಪಾತ್ರದ ಮೊದಲ ಲುಕ್ ಬಿಡುಗಡೆ ಮಾಡುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಿದೆ. ಪೋಸ್ಟರ್‌ನಲ್ಲಿ ಸಂಜಯ್ ದತ್ ಅವರು ತಮ್ಮ ಅರ್ಧ ಮುಖವನ್ನು ಕವರ್ ಮಾಡಿಕೊಂಡಿದ್ದು, ಭಯಾನಕ ಲುಕ್ ಕೊಟ್ಟಿದ್ದಾರೆ. ಜೊತೆಗೆ ಹಿಂದೆ ನೂರಾರು ಮಂದಿ ಇರುವುದನ್ನು ಕಾಣಬಹುದಾಗಿದೆ.

ಪೋಸ್ಟರ್‌ನಲ್ಲಿ ಸಂಜಯ್ ದತ್ ಈಗ ಅಧೀರ ಎಂದು ಬರೆಯಲಾಗಿದೆ. ಸಂಜಯ್ ಅವರ ಲುಕ್ ರಿಲೀಸ್ ಮಾಡಿ ಚಿತ್ರತಂಡ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದೆ.

ಈ ಹಿಂದೆ ಹೊಂಬಾಳೆ ಫಿಲಂಸ್ ತನ್ನ ಟ್ವಿಟ್ಟರ್ `ಕೆಜಿಎಫ್ ಚಾಪ್ಟರ್-2′ ಸಿನಿಮಾದ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿ ಮತ್ತೊಂದು ಬಿಗ್ ನ್ಯೂಸ್‍ಗೆ ಕಾಯುವಂತೆ ಅಭಿಮಾನಿಗಳಿಗೆ ತಿಳಿಸಿತ್ತು. ಅದರಲ್ಲಿ ಎರಡು ಕೈಗಳನ್ನು ಹಿಂದೆ ಹಿಡಿದಿರುವ ಅಧೀರನ ಪೋಸ್ಟರ್ ಆಗಿತ್ತು.

ಯಾರು ಈ ಅಧೀರ?
ಕೆಜಿಎಫ್ ಸಿನಿಮಾದಲ್ಲಿ ಖಳನಾಯಕ ಸೂರ್ಯವರ್ಧನ್ ಬರುತ್ತಾನೆ. ಆತನ ಸಹೋದರನೇ ಅಧೀರ. ಆದರೆ ಮೊದಲ ಭಾಗದಲ್ಲಿ ಅಧೀರನ ಪಾತ್ರ ಕೆಲವೇ ನಿಮಿಷವಿತ್ತು. ಅಷ್ಟೇ ಅಲ್ಲದೇ ಆತನ ಮುಖವನ್ನು ತೋರಿಸಿರಲಿಲ್ಲ. ಸೂರ್ಯವರ್ಧನ್ ಸಾವಿನ ನಂತರ ಗರುಡ ಅಧಿಕಾರಕ್ಕೆ ಬರುತ್ತಾನೆ. ಆಗ ರಾಕಿ ಭಾಯ್‍ಗೆ ಸುಪಾರಿ ಕೊಟ್ಟು ಗರುಡನನ್ನು ಕೊಲೆ ಮಾಡಿಸಿದ್ದನು. ಇದೀಗ `ಕೆಜಿಎಫ್ ಚಾಪ್ಟರ್ 2′ ಸಿನಿಮಾದಲ್ಲಿ ಅಧೀರ ಬರುತ್ತಾನೆ.

Comments

Leave a Reply

Your email address will not be published. Required fields are marked *