ಪ್ರಮಾಣವಚನ ಸ್ವೀಕರಿಸಿ ಸ್ಪೀಕರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಸಂಸದೆ: ವಿಡಿಯೋ ವೈರಲ್

ನವದೆಹಲಿ: ಮೊದಲನೇ ಬಾರಿಗೆ ಸಂಸದೆ ಆದ ನಟಿ ನುಸ್ರತ್ ಜಹಾನ್ ಮದುವೆಯಿಂದಾಗಿ ಪ್ರಮಾಣ ವಚನ ಸ್ವೀಕರಿಸಲಿಲ್ಲ. ಮಂಗಳವಾರ ಮೊದಲ ಬಾರಿಗೆ ಸಂಸತ್‍ನಲ್ಲಿ ಭಾಗವಹಿಸಿ ಅವರು ಹಾಗೂ ಮಿಮಿ ಚಕ್ರವರ್ತಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ವೇಳೆ ನುಸ್ರತ್ ಸ್ಪೀಕರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

ನುಸ್ರತ್ ಜಹಾನ್ ಮಂಗಳವಾರ ಸಂಸತ್‍ನಲ್ಲಿ ಬಂಗಾಳಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನುಸ್ರತ್ ಮದುವೆಯಲ್ಲಿ ಭಾಗಿಯಾಗಿದ್ದ ಕಾರಣ ನಟಿ, ಸಂಸದೆ ಮಿಮಿ ಚಕ್ರವರ್ತಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಇಬ್ಬರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪ್ರಮಾಣವಚನ ಸ್ವೀಕರಿಸಿದ ಬಳಿಕ ನುಸ್ರತ್ ಜೈ ಹಿಂದ್, ವಂದೇ ಮಾತರಂ ಹಾಗೂ ಜೈ ಬಾಂಗ್ಲಾ ಎಂದು ಹೇಳಿದ್ದಾರೆ. ಅಲ್ಲದೆ ಸ್ಪೀಕರ್ ಓಂ ಬಿರ್ಲಾ ಅವರ ಕಾಲಿಗೆ ಬಿದ್ದು ಆಶೀರ್ವಾದ ಕೂಡ ಪಡೆದುಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ನುಸ್ರತ್ ಅವರ ಈ ನಡೆ ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನುಸ್ರತ್ ಜಹಾನ್ ಕಳೆದ ವಾರ ಉದ್ಯಮಿ ನಿಖಿಲ್ ಜೈನ್ ಜೊತೆ ಟರ್ಕಿಯ ಬೋದ್ರಮ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಬಗ್ಗೆ ನುಸ್ರತ್ ತಮ್ಮ ಟ್ವಿಟ್ಟರಿನಲ್ಲಿ ಮದುವೆ ಫೋಟೋ ಹಾಕಿ ಅಧಿಕೃತವಾಗಿ ಎಲ್ಲರಿಗೂ ತಿಳಿಸಿದ್ದರು. ಜುಲೈ 4ರಂದು ನುಸ್ರತ್ ಹಾಗೂ ನಿಖಿಲ್ ಜೈನ್ ಕೋಲ್ಕತ್ತಾದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬೆಂಗಾಲಿ ಕಲಾವಿದರು ಹಾಗೂ ರಾಜಕೀಯ ನಾಯಕರು ಆಗಮಿಸುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆಯಲ್ಲಿ 3.50 ಲಕ್ಷ ಮತಗಳ ಅಂತರದಿಂದ ನುಸ್ರತ್ ಜಹಾನ್ ಗೆದ್ದಿದ್ದರು. ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಖುಷಿಯಲ್ಲಿದ್ದ ನುಸ್ರತ್ ನಟಿ ಮಿಮಿ ಚಕ್ರವರ್ತಿ ಜೊತೆ ಸಂಸತ್ ಭವನದ ಮುಂದೆ ನಿಂತು ಫೋಟೋಗೆ ಪೋಸ್ ಕೊಟ್ಟು ಟ್ರೋಲ್ ಆಗಿದ್ದರು.

Comments

Leave a Reply

Your email address will not be published. Required fields are marked *