ಲಾಕ್‍ಡೌನ್‍ ಟೈಮಲ್ಲಿ ಟೀಚರ್ ಆದ ಬಸಣ್ಣಿ ಬೆಡಗಿ

ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ಬಹುತೇಕರು ಮನೆಯಲ್ಲಿ ಬಂಧಿಯಾಗಿದ್ದು, ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಲು ಬಯಸುತ್ತಿದ್ದಾರೆ. ಆದರೆ ಎಲ್ಲಾ ಕೊರೊನಾ ಮಾಯೆ ಹೀಗಾಗಿ ಮನೆಯಲ್ಲೇ ಬಂಧಿಯಾಗಬೇಕಿದೆ. ಹಲವು ನಟ ನಟಿಯರಿಗೂ ಇದೇ ರೀತಿಯ ಬೇಸರ ಕಾಡುತ್ತಿದ್ದು, ಯಾವಾಗ ಶೂಟಿಂಗ್ ಹಾಜರಾಗುತ್ತೇವೋ ಎಂದು ಎದುರು ನೋಡುತ್ತಿದ್ದಾರೆ. ಅದೇ ರೀತಿ ಬಸಣ್ಣಿ ಹಾಡಿನ ಖ್ಯಾತಿಯ ನಟಿ ತಾನ್ಯ ಹೋಪ್ ಶೂಟಿಂಗ್‍ಗೆ ತೆರಳಲು ಕಾತರದಿಂದ ಕಾಯುತ್ತಿದ್ದಾರಂತೆ.

ತಾನ್ಯ ಇತ್ತೀಚೆಗೆ ಕನ್ನಡ, ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಸಖತ್ ಬ್ಯುಸಿಯಾಗಿದ್ದರು. ಹಲವು ಚಿತ್ರಗಳಲ್ಲಿ ತೊಡಗಿಕೊಂಡಿದ್ದರು. ಹೀಗಿರುವಾಗಲೇ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಇದನ್ನೇ ಸದುಪಯೋಗ ಪಡಿಸಿಕೊಂಡು ಕುಟುಂಬದೊಂದಿಗೆ ದಿನಗಳನ್ನು ದೂಡುತ್ತಿದ್ದಾರೆ.

ಹಲವು ನಟ ನಟಿಯರು ಸಾಮಾಜಿಕ ಕಾರ್ಯ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ, ತೊಡಗಿಕೊಳ್ಳುವ ಮೂಲಕ ಲಾಕ್‍ಡೌನ್ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಬೇಜಾರು ಎಂದು ಸಪ್ಪೆ ಮೋರೆ ಹೊತ್ತು ಕುಳಿತಿದ್ದಾರೆ. ಈ ಮಧ್ಯೆ ನಟಿ ತಾನ್ಯ ಹೋಪ್ ತಮ್ಮದೇ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಆದರೂ ಲಾಕ್‍ಡೌನ್ ದಿನಗಳು ಅವರಿಗೆ ಬೇಸರ ತರಿಸಿವೆಯಂತೆ, ನನ್ನೊಂದಿಗೆ ಕುಟುಂಬಸ್ಥರು ಇಲ್ಲದಿದ್ದರೆ ಪರಿಸ್ಥಿತಿ ಗಂಭಿರವಾಗುತ್ತಿತ್ತು ಎಂದು ಹೇಳಿದ್ದಾರೆ.

ಲಾಕ್‍ಡೌನ್‍ನ ತಮ್ಮ ನಿತ್ಯ ಜೀವನದ ಕುರಿತು ಹಂಚಿಕೊಂಡಿರುವ ಅವರು, ಗೊಂದಲಕ್ಕೊಳಗಾಗಿದ್ದೇನೆ. ಕೆಲವು ದಿನ ತುಂಬಾ ಚುರುಕಾಗಿ ಕೆಲಸ ಮಾಡಿದರೆ, ಇನ್ನೂ ಕೆಲ ದಿನ ಬೆಡ್ ಬಿಟ್ಟು ಏಳುವುದೇ ಇಲ್ಲ. ಹೀಗಾಗಿ ರಾತ್ರಿಯಲ್ಲೇ ಜೀವನ ಕಳೆಯುತ್ತಿದ್ದೇವೆ ಅನ್ನಿಸುತ್ತದೆ. ಎಚ್ಚರಗೊಂಡ ತಕ್ಷಣ ಭಯಾನಕ ಸುದ್ದಿ ಕೇಳುವಂತಾಗಿದೆ.

ಇಂತಹ ದಿನಗಳು ತುಂಬಾ ನೆಗೆಟಿವ್ ಪರಿಣಾಮಗಳನ್ನು ಬೀರುತ್ತವೆ. ನಾನು ಅದೃಷ್ಟವಂತೆ ಏಕೆಂದರೆ ನನ್ನ ಜೊತೆ ಕುಟುಂಬವಿದೆ. ಅಂತಹ ಚೌಕಟ್ಟಿನಿಂದ ನನ್ನನ್ನು ಹೊರ ತರುತ್ತದೆ. ನನ್ನ ಸಹೋದರ, ಆತನ ಮಕ್ಕಳು ಹಾಗೂ ಅಳಿಯನೊಂದಿಗೆ ಕಾಲ ಕಳೆಯುತ್ತಿದ್ದೇನೆ. ಇನ್ನೂ ವಿಶೇಷವೆಂದರೆ ಅಳಿಯನಿಗೆ ಮನೆಯಲ್ಲೇ ಶಾಲೆ ಆರಂಭಿಸಿದ್ದೇನೆ, ಪಾಠ ಹೇಳುತ್ತಿದ್ದೇನೆ. ಇಂಗ್ಲಿಷ್ ಕ್ಲಾಸ್ ತೆಗೆದುಕೊಳ್ಳುತ್ತೇನೆ. ಅವನಿಗೆ ಪಾಠ ಮಾಡುವುದನ್ನು ಆರಂಭಿಸಿದ ನಂತರ ನಾನೂ ಕೊಡುಗೆ ನೀಡುತ್ತಿದ್ದೇನೆ ಎಂಬ ಭಾವ ಮೂಡುತ್ತಿದೆ. ಇದು ನನಗೆ ತುಂಬಾ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಕೆಲಸದ ಕುರಿತು ಮಾತನಾಡಿರುವ ಅವರು 2016ರಿಂದಲೂ ನಾನು ಒಂದು ದಿನವೂ ಫ್ರೀ ಇರಲಿಲ್ಲ. ಪ್ರತಿ ದಿನ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುತ್ತಿದ್ದೆ. ಆದರೆ ಈಗ ಇಷ್ಟು ದಿನ ಮನೆಯಲ್ಲಿರುವುದು ತುಂಬಾ ಕಷ್ಟವೆನಿಸುತ್ತಿದೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇಲ್ಲದ ಕುರಿತು ಮಾತನಾಡಿರುವ ಅವರು ಸಿನಿಮಾ ಅಪ್‍ಡೇಟ್‍ಗಾಗಿ ಮಾತ್ರ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತೇನೆ. ಈಗ ಏನೂ ಇಲ್ಲ, ಹೀಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿಲ್ಲ ಎಂದು ಹೇಳಿದ್ದಾರೆ.

ತಾನ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಚಿರಪರಿಚಿತರಾದರು. ಬಸಣ್ಣಿ ಹಾಡಿನ ಮೂಲಕ ಸದ್ದು ಮಾಡಿದರು. ನಂತರ ಅಮರ್ ಸಿನಿಮಾ ಅಭಿಷೇಕ್ ಜೊತೆ ರೊಮ್ಯಾನ್ಸ್ ಮಾಡಿದ್ದರು. ಇದೀಗ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *