ರೀಲ್ ಹುಡ್ಗನ ಜೊತೆಗೆ ರಿಯಲ್ ಆಗಿ ಸಪ್ತಪದಿ ತುಳಿಯಲಿದ್ದಾರೆ ಕುಲವಧು ಖ್ಯಾತಿಯ ವಚನಾ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಿರುತೆರೆ ಮತ್ತು ಬೆಳ್ಳಿತೆರೆಯ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ‘ಕುಲವಧು’ ಧಾರಾವಾಹಿಯ ವಚನಾ ಖ್ಯಾತಿಯ ಅಮೃತಾ ಸೀರಿಯಲ್ ಹುಡುಗನ ಜೊತೆಗೆ ಮದುವೆಯಾಗುತ್ತಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಅಮೃತಾ ಅವರು, ವಚನಾ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗ ಕಿರುತೆರೆಯಲ್ಲಿ ಅಭಿನಯಿಸಿದ್ದ ನಟ ರಘು ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ರಘು ಮತ್ತು ಅಮೃತಾ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ವರ್ಷ ಮೇ 12 ಮತ್ತು 13 ರಂದು ಮದುವೆಯಾಗುವ ಸಾಧ್ಯತೆ ಇದೆ. ಮದುವೆಯ ಬಗ್ಗೆ ರಘು ಅವರೇ ತಮ್ಮ ಫೇಸ್‍ಬುಕ್ ನಲ್ಲಿ ತಿಳಿಸಿದ್ದಾರೆ.

ರಘು ಮತ್ತು ಅಮೃತಾ ಅವರು ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಇವರಿಬ್ಬರು ಈ ಹಿಂದೆ ಒಟ್ಟಿಗೆ ‘ಮಿ. ಆ್ಯಂಡ್ ಮಿಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿ ಪ್ರೇಕ್ಷಕರ ಮನೆ ಗೆದ್ದಿದ್ದರು. ಜೋಡಿ ಐಶ್ವರ್ಯ ಮತ್ತು ರಂಗೇಗೌಡ ಪಾತ್ರವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಇವರಿಬ್ಬರಿಗೆ ‘ಬೆಸ್ಟ್ ಜೋಡಿ’ ಅವಾರ್ಡ್ ಕೂಡ ಬಂದಿತ್ತು.

ನಾವಿಬ್ಬರು ಒಟ್ಟಿಗೆ ‘ಮಿ. ಆ್ಯಂಡ್ ಮಿಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದು, ದಂಪತಿಯ ಪಾತ್ರ ಮಾಡಿದ್ದೇವೆ. ಶೂಟಿಂಗ್ ವೇಳೆ ಸಮಯ ಸಿಕ್ಕಾಗ ಮಾತನಾಡುತ್ತಿದ್ದೇವು. ನಾವು ಹಲವು ವರ್ಷಗಳ ಕಾಲ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೆವು. ಆದರೆ ಧಾರಾವಾಹಿ ಮುಗಿದ ಬಳಿಕ ಇಬ್ಬರು ಬೇರೆ ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದೆವು. ಕೊನೆಗೆ ಒಂದು ದಿನ ಇಬ್ಬರು ಭೇಟಿಯಾಗಿ ಪರಸ್ಪರ ನಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೆವು ಎಂದು ರಘು ಹೇಳಿದ್ದಾರೆ.

ನನ್ನ ಜೀವನದಲ್ಲಿ ಅಮೃತಾ ಬರುತ್ತಾರೆ ಎಂದುಕೊಂಡಿರಲಿಲ್ಲ. ಅವರು ವೃತ್ತಿ ಜೀವನದಲ್ಲಿ, ವೈಯಕ್ತಿಕ ಜೀವನದಲ್ಲೂ ಸದಾ ನನ್ನ ಬೆಂಬಲಕ್ಕೆ ನಿಂತಿದ್ದರು. ನಾವಿಬ್ಬರು ಪರಸ್ಪರ ಒಬ್ಬೊಬ್ಬರನ್ನು ಅರ್ಥ ಮಾಡಿಕೊಂಡ ಬಳಿಕ ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದ್ದೆವು. ಕೊನೆಗೆ ನಮ್ಮ ಕುಟುಂಬಕ್ಕೆ ಪ್ರೀತಿ ವಿಚಾರವನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆದು ಗುರು-ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ರಘು ತಮ್ಮ ಪ್ರೀತಿ ಪಯಣದ ಬಗ್ಗೆ ತಿಳಿಸಿದ್ದಾರೆ.

ಸದ್ಯಕ್ಕೆ ಇಬ್ಬರು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಒಂದು ವೇಳೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರೆ ನಟನೆ ಮಾಡುವುದಾಗಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *