ಕೋಲಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ದಿಢೀರ್ ಪ್ರತ್ಯಕ್ಷ

ಕೋಲಾರ: ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಬಿಡುಗಡೆಗೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ಕೋಲಾರದಲ್ಲಿ ಪ್ರತ್ಯಕ್ಷರಾಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹುದುಕುಳ ಬಳಿ ಇರುವ ಜೋಯನ್ ಗಾಲ್ಫ್‍ಗೆ ನಟ ಯಶ್ ಬುಧವಾರ ಭೇಟಿ ನೀಡಿದ್ದಾರೆ. ಈ ವೇಳೆ ಗಾಲ್ಫ್ ಅಧ್ಯಕ್ಷ ರೈ ಹಾಗೂ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿಯನ್ನು ಯಶ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಯಶ್ ಭೇಟಿ ನೀಡಿರುವ ಫೋಟೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ರಾಕಿಂಗ್ ಸ್ಟಾರ್ ಜೊತೆ ಪೀಪಲ್ ಸ್ಟಾರ್ ಎಂಎಲ್‍ಎ ಎಂದು ಹಣೆ ಪಟ್ಟಿ ಬರೆದು ಹಂಚಿಕೊಂಡಿದ್ದಾರೆ. ಭೇಟಿ ವೇಳೆ ನಟ ಯಶ್ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿ ನೂತನ ಶಾಸಕರಾಗಿ ಆಯ್ಕೆ ಆಗಿರುವ ಶಾಸಕ ಎಸ್‍ಎನ್ ನಾರಾಯಣಸ್ವಾಮಿ ಅವರಿಗೆ ಶುಭಾಶಯ ಕೋರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸಕ್ರೀಯರಾಗಿದ್ದ ನಟ ಯಶ್ ತಮ್ಮ ಆಪ್ತ ವಲಯದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.

ಸದ್ಯ ಸ್ಯಾಂಡಲ್‍ವುಡ್ ಸಿನಿಮಾ ಅಭಿಮಾನಿಗಳು ಯಶ್ ಅವರ ಕೆಜಿಎಫ್ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದು, ಚಿತ್ರ ತಂಡ ಆರಂಭದಿಂದಲೇ ಚಿತ್ರ ಕಥೆಯ ಕುರಿತ ರೋಚಕತೆಯನ್ನು ಉಳಿಸಿಕೊಂಡು ಬರುತ್ತಿದೆ. ಚಿತ್ರದಲ್ಲಿ ಯಶ್ ಅವರ ಲುಕ್ ಸಹ ಅಭಿಮಾನಿಗಳಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳ ಹಿಂದೆ ಯಶ್ ರ ಹೊಸ ಲುಕ್ ನ ಫೋಟೋವನ್ನು ಅಭಿಮಾನಿಗಳೇ ಸಿದ್ಧಗೊಳಿಸಿ ಬಿಡುಗಡೆಗೊಳಿಸಿದ್ದರು. ಸದ್ಯಕ್ಕೆ ಕೆಜಿಎಫ್ ಚಿತ್ರೀಕರಣ ನಡೆಯುತ್ತಿದ್ದು, ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿಯಿದೆ.

Comments

Leave a Reply

Your email address will not be published. Required fields are marked *