ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಪೈಲ್ವಾನ್

ಬೆಂಗಳೂರು: ಚಂದನವನದ ಅಭಿನಯ ಚಕ್ರವರ್ತಿ ಸುದೀಪ್ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಪೈರಸಿ ಸಿನಿಮಾದ ನೋಡದೇ, ಚಿತ್ರಮಂದಿರಗಳಿಗೆ ಹೋಗಿ ಚಿತ್ರ ವೀಕ್ಷಣೆ ಮಾಡಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಮ್ಮ ಹಾರ್ಡ್ ವರ್ಕ್ ಪರಿಗಣಿಸಿ ಸಿನಿಮಾವನ್ನು ಥಿಯೇಟರ್ ಗಳಲ್ಲಿ ವೀಕ್ಷಣೆ ಮಾಡಿರೋದು ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ನಮ್ಮ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಶುಕ್ರವಾರ ರಾತ್ರಿ ಚಿತ್ರದ ಪೈರಸಿ ಬಗ್ಗೆ ಖಡಕ್ ಟ್ವೀಟ್ ಮಾಡಿದ್ದ ಸುದೀಪ್, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ನನ್ನ ಮೌನ, ತಾಳ್ಮೆ, ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳು ಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳನ್ನು ಬಯಲಿಗೆ ತಂದರೆ ನೆಮ್ಮದಿಯ ನಿದ್ರೆ ಬರುತ್ತದೆ. ಆ ಸಂದರ್ಭ ಕೆಲವು ದಿನಗಳ ಬರಲಿದೆ ಎಂದು ಬರೆದುಕೊಂಡಿದ್ದರು.

ಪೈಲ್ವಾನ್ ಸಿನಿಮಾದ ಲಿಂಕ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ದಾಬಸ್‍ಪೇಟೆಯ ರಾಕೇಶ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಯಲ್ಲಿ ತಾನೋರ್ವ ದರ್ಶನ್ ಅಭಿಮಾನಿ. ನೆಚ್ಚಿನ ನಟನ ಮೇಲಿನ ಅಭಿಮಾನದಿಂದಾಗಿ ಸಿನಿಮಾ ಲಿಂಕ್ ಶೇರ್ ಮಾಡಿದ್ದೇನೆ ಹೊರತು ಹಣಕ್ಕಾಗಿ ಅಲ್ಲ ಎಂದು ತಪ್ಪೊಪ್ಪಿಕೊಂಡಿದ್ದನು. ರಾಕೇಶ್ ಗೆ ಸಿನಿಮಾದ ಲಿಂಕ್ ಹೇಗೆ ಸಿಕ್ಕಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *