ಟೂರ್ನಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಜಿ.ಪರಮೇಶ್ವರ್ ಗೆ ಕಿಚ್ಚನ ಮನವಿ

ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಸ್ಟಾರ್ ಗಳ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಲೀಗ್ ಪ್ರಾರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಅವರು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆ.

ಸೆಪ್ಟೆಂಬರ್ 1 ರಂದು ಶನಿವಾರ ಸುದೀಪ್ ಅವರು ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಪರಮೇಶ್ವರ್ ಅವರೇ ಟ್ಟಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. “ನಟ ಸುದೀಪ್ ಅವರು ಭೇಟಿ ಮಾಡಿ ಕರ್ನಾಟಕ ಚಲನಚಿತ್ರ ಕಪ್ ಬಗ್ಗೆ ವಿವರಿಸಿದ್ದಾರೆ. ಬಳಿಕ ಟೂರ್ನಮೆಂಟಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಕೋರಿದರು. ನಾವು ಕೂಡ ಬೇಕಾದ ಎಲ್ಲ ಭದ್ರತೆಯನ್ನು ನೀಡುವ ಭರವಸೆಯನ್ನು ನೀಡಿದ್ದೇವೆ. ಟೂರ್ನಿಯಿಂದ ಬರುವ ಹಣದಿಂದ ಕೊಡಗಿನ ನೆರೆ ಪರಿಹಾರಕ್ಕೂ ನೆರವು ಕೊಡುವ ನಿರ್ಧಾರ ಕೇಳಿ ನನಗೆ ಖುಷಿಯಾಯಿತು, ಯಶಸ್ವಿಯಾಗಿ ನಡೆಯಲಿ” ಎಂದು ಬರೆದುಕೊಂಡಿದ್ದು, ಅವರು ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಟ್ವೀಟ್ ಮಾಡಿದ್ದಾರೆ.

ಸ್ಯಾಂಡಲ್‍ವುಡ್ ಸ್ಟಾರ್ ಗಳು ಸೇರಿ ಆರಂಭಿಸಿರುವ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಲೀಗ್ (ಕೆಸಿಸಿ) ಸತತವಾಗಿ 2ನೇ ಬಾರಿಗೆ ಆಯೋಜನೆಗೊಳ್ಳುತ್ತಿದೆ. ಈ ಬಗ್ಗೆ ಸ್ಟಾರ್ ನಟರು ಸುದಿಗೋಷ್ಠಿ ನಡೆಸಿ ಕೆಸಿಸಿ ಬಗ್ಗೆ ಮಾಹಿತಿ ತಿಳಿಸಿದ್ದರು. ಕೆಸಿಸಿ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹೊರಬಿಡಲಾಗಿದ್ದು, ಇದೇ ತಿಂಗಳ 8 ಮತ್ತು 9 ರಂದು ಕೆಸಿಸಿ ಟೂರ್ನಿ ನಡೆಯಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ವೇಳೆ ಅರ್ಬಾಜ್ ಖಾನ್, ಸೊಹೈಲ್ ಖಾನ್, ಸುನಿಲ್ ಶೆಟ್ಟಿ, ಧನುಷ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಇದೇ 8 ರಂದು ಕೆಸಿಸಿ 2ನೇ ಟೂರ್ನಿ ಉದ್ಘಾಟನೆಯಾಗಲಿದ್ದು, ಮೊದಲ ದಿನ 4 ಪಂದ್ಯಗಳು ಹಾಗೂ 2ನೇ ದಿನ 2 ತಂಡಗಳ ಸ್ಪರ್ಧೆ ನಡೆಯಲಿದೆ ಎಂದು ಸುದೀಪ್ ತಿಳಿಸಿದ್ದಾರೆ.

ಕೆಸಿಸಿ ಟೂರ್ನಿಯ ಪಂದ್ಯಗಳ ಟಿಕೆಟ್ ಇಂದಿನಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದೇ 5 ರಿಂದ ಎಲ್ಲಾ ಅಂತರಾಷ್ಟ್ರೀಯ ಆಟಗಾರರು ಆಗಮಿಸುತ್ತಿದ್ದು, ಅವರೊಂದಿಗೆ ಎಲ್ಲರೂ ಅಭ್ಯಾಸ ಮಾಡಲಿದ್ದೇವೆ. ಟೂರ್ನಿಗೆ ಸಹಕಾರ ನೀಡಿದ ಎಲ್ಲಾ ಆಟಗಾರರು, ನಿರ್ಮಾಪಕರ ಸಂಘ, ನಿರ್ದೇಶಕ ಸಂಘ ಸೇರಿದಂತೆ ಎಲ್ಲಾ ಕಲಾವಿದರು, ತಂತ್ರಜ್ಞಾನರಿಗೂ ಧನ್ಯವಾದವನ್ನು ಕೂಡ ಸುದೀಪ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *