ಶೂಟಿಂಗ್ ವೇಳೆ ಅಪಘಾತ – ಕಿಚ್ಚ ಸುದೀಪ್ ಸ್ಪಷ್ಟನೆ

ಬೆಂಗಳೂರು: ಕೆಲವು ದಿನಗಳ ಹಿಂದೆ ನಟ ಸುದೀಪ್ ಅವರಿದ್ದ ಕಾರು ಅಪಘಾತವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ನಟ ಸುದೀಪ್ ಅವರೇ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ.

ಸೋಮವಾರ ‘ದಿ ವಿಲನ್’ ಸಿನಿಮಾದ ಹೊಚ್ಚ ಹೊಸ ಟೀಸರ್ ಬಿಡುಗಡೆಯಾಗಿದೆ. ಈ ಕಾರ್ಯಕ್ರಮಕ್ಕೆ ಸುದೀಪ್ ಅವರು ಬಂದಿರಲಿಲ್ಲ. ಶೂಟಿಂಗ್ ವೇಳೆ ಬಿದ್ದು ಪೆಟ್ಟಾಗಿರುವ ಕಾರಣದಿಂದ ‘ದಿ ವಿಲನ್’ ಮಾಧ್ಯಮಗೋಷ್ಠಿಗೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿತ್ತು. ಸುದೀಪ್ ಈ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ಈಗ ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.

ಟ್ವೀಟ್ ನಲ್ಲೇನಿದೆ?
‘ದಿ ವಿಲನ್’ ಚಿತ್ರ ತಂಡಕ್ಕೆ ನನ್ನ ಶುಭಾಶಯಗಳು. ‘ದಿ ವಿಲನ್’ ಪತ್ರಿಕಾಗೋಷ್ಠಿಯಲ್ಲಿ ನಾನು ಭಾಗವಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಾಧ್ಯಮ ಸ್ನೇಹಿತರು ಮತ್ತು ಚಿತ್ರತಂಡಕ್ಕೆ ಕ್ಷಮಾಪಣೆಯನ್ನು ತಿಳಿಸುತ್ತಿದ್ದೇನೆ. ಇಂದು ಸಿನಿಮಾದ ಶೂಟಿಂಗ್ ನಡೆಯುವ ವೇಳೆ ನನ್ನ ಬೆನ್ನಿನ ಭಾಗಕ್ಕೆ ಪೆಟ್ಟಾಗಿದೆ. ಹಾಗಾಗಿ ನಾನು ಪ್ರಯಾಣ ಮಾಡಲು ಸಾಧ್ಯವಾಗಲಿಲ್ಲ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು’ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಸುದೀಪ್ ಅವರು ತಮಗೆ ಪೆಟ್ಟಾಗಿದೆ ಎಂದು ಹೇಳಿದ್ದಾರೆ. ಆದರೆ ಯಾವ ಸಿನಿಮಾದ ಚಿತ್ರೀಕರಣದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿಲ್ಲ. ಇತ್ತೀಚೆಗೆ ಹೈದರಾಬಾದಿನಲ್ಲಿ ‘ಪೈಲ್ವಾನ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಆದ್ದರಿಂದ ಪೈಲ್ವಾನ್ ಚಿತ್ರೀಕರಣದಲ್ಲಿಯೇ ಸುದೀಪ್ ಅವರಿಗೆ ಪೆಟ್ಟಾಗಿರಬಹುದು ಎಂದು ಹೇಳಲಾಗುತ್ತಿದೆ.

ಹರಿದಾಡಿದ್ದ ಸುದ್ದಿಯೇನು?:
ನಟ ದರ್ಶನ್ ಅವರ ಕಾರ್ ಮೈಸೂರಿನಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡ ಬೆನ್ನಲ್ಲೇ ನಟ ಸುದೀಪ್ ಅವರ ಕಾರ್ ಕೂಡ ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿತ್ತು. ಈ ಸುದ್ದಿ ಜೊತೆಗೆ ಸುದೀಪ್ ಹಾಗೂ ಅಪಘಾತಕ್ಕೀಡಾದ ಕಾರಿನ ಫೋಟೋ ಕೂಡ ಪೋಸ್ಟ್ ಮಾಡಲಾಗಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಅಭಿಮಾನಿಗಳು, ಈ ಸುದ್ದಿ ಸುಳ್ಳು. ಕಿಚ್ಚ ಆರಾಮಾಗಿದ್ದಾರೆ. ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದರು. ಆದ್ರೆ ಇದ್ಯಾವುದಕ್ಕೂ ಸುದೀಪ್ ಅವರು ಪ್ರತಿಕ್ರಿಯಿಸಿರಲಿಲ್ಲ. ಆದ್ರೆ ಇದೀಗ ಬೆನ್ನಿಗೆ ಗಾಯವಾಗಿದೆ ಅಂತ ಹೇಳುವ ಮೂಲಕ ಕಿಚ್ಚ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಟಿಸಿರುವ ‘ದಿ ವಿಲನ್’ ಸಿನಿಮಾದ ಟೀಸರ್ ಸೋಮವಾರ ರಿಲೀಸ್ ಆಗಿದೆ. ಸದ್ಯಕ್ಕೆ ಟೀಸರ್ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ 1 ನಲ್ಲಿ ಇದೆ. ಅಕ್ಟೋಬರ್ 18 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ತಿಂಗಳು 18 ಕ್ಕೆ ‘ದಿ ವಿಲನ್’ ಸಿನಿಮಾ ಬಿಡುಗಡೆಯಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *