ಕಾಂಡೋಮ್ ಜಾಹೀರಾತಿನಲ್ಲಿ ನಟಿಸಲ್ಲ: ರಣ್‍ವೀರ್ ಸಿಂಗ್

ಮುಂಬೈ: ಬಾಲಿವುಡ್ ಬಾಜೀರಾವ್ ರಣ್‍ವೀರ್ ಸಿಂಗ್ ತಾವು ಇನ್ನ್ಮುಂದೆ ಕಾಂಡೋಮ್ ಜಾಹೀರಾತುಗಳಲ್ಲಿ ನಟಿಸಲ್ಲ ಎಂದು ಹೇಳಿಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ಕಾಂಡೋಮ್ ಕಂಪನಿಯ ರಾಯಭಾರಿಯಾದಗ ಬಾಲಿವುಡ್ ಅಂಗಳದ ಬಹುತೇಕರು ಹುಬ್ಬೇರಿಸಿದ್ದರು.

ಐದು ವರ್ಷದ ಹಿಂದೆ ರಣ್‍ವೀರ್ ಕಂಪನಿಯ ಒಪ್ಪಂದ ಈ ವರ್ಷ ಅಂತ್ಯವಾಗಲಿದೆ. ಕಂಪನಿ ಒಪ್ಪಂದವನ್ನು ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದ್ದರೂ, ರಣ್‍ವೀರ್ ‘ನೋ’ ಎಂದಿದ್ದಾರೆ ಎಂಬ ಸುದ್ದಿ ಬಾಲಿವುಡ್ ಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ರಣ್‍ವೀರ್ ನಟನೆಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿವೆ. ಇತ್ತೀಚೆಗೆ ತೆರೆಕಂಡ ಸಿಂಬಾ, ಗಲ್ಲಿ ಬಾಯ್ ಪ್ರೇಕ್ಷಕರ ನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದವು. ಸಿನಿಮಾಗಳ ಯಶಸ್ಸಿನ ಬಳಿಕ ರಣ್‍ವೀರ್ ಸಂಭಾವನೆ ಹೆಚ್ಚಿಸಿಕೊಂಡಿದ್ದರಿಂದ ಕಾಂಡೋಮ್ ಕಂಪನಿಯ ಜೊತೆಗೆ ಒಪ್ಪಂದ ಮುಂದುವರಿಸಲು ಹಿಂದೇಟು ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾದ ಸ್ಟಾರ್ ನಟರು ಕಾಂಡೋಮ್ ಜಾಹೀರಾತಿನಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ರಣ್‍ವೀರ್ ಯಾವುದನ್ನು ಲೆಕ್ಕಿಸದೇ ಕಾಂಡೋಮ್ ಜಾಹಿರಾತಿನಲ್ಲಿ ಮಿಂಚಿದ್ದರು. ರಣ್‍ವೀರ್ ಜಾಹಿರಾತಿನಿಂದ ಕಂಪನಿಯ ಉತ್ಪನ್ನಗಳ ಮಾರಾಟ ಸಹ ಏರಿಕೆ ಕಂಡಿತ್ತು. ಗುಳಿ ಕೆನ್ನೆ ಗೆಳತಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ರಣ್‍ವೀರ್ ಗೆ ಕಾಂಡೋಮ್ ಕಂಪನಿಯೊಂದು ತನ್ನದೇ ಶೈಲಿಯಲ್ಲಿ ವಿಶ್ ಮಾಡಿತ್ತು.

ಸದ್ಯ ರಣ್‍ವೀರ್ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಕಥೆಯನ್ನು ಸಿನಿಮಾ ಒಳಗೊಂಡಿದೆ. ಇದೀಗ ರಣ್‍ವೀರ್ ಸಂಸಾರಿಯಾಗಿದ್ದರಿಂದ ಈ ರೀತಿಯ ಜಾಹೀರಾತುಗಳನ್ನು ತಿರಸ್ಕರಿಸುತ್ತಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *