ಈಗ ಆ ಕಾರ್ ನನ್ನದಲ್ಲ – ಸ್ಪಷ್ಟನೆ ಕೊಟ್ಟ ರಕ್ಷಿತ್ ಶೆಟ್ಟಿ

ಬೆಂಗಳೂರು: ನೋ ಪಾರ್ಕಿಂಗ್ ಜಾಗದಲ್ಲಿ ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ

ನೋ ಪಾರ್ಕಿಂಗ್ ಬೋರ್ಡ್ ಹಾಕಿದ್ದರೂ ಕಾರ್ ಪಾರ್ಕ್ ಮಾಡಿದ್ದರಿಂದ ರಕ್ಷಿತ್ ವಿರುದ್ಧ ಜೆಪಿ ನಗರದ ನಿವಾಸಿಗಳು ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಕ್ಷಿತ್ ಶೆಟ್ಟಿ, ಆ ಕಾರ್ ನನ್ನದಲ್ಲ. ನಾನು ಕಾರನ್ನು ನನ್ನ ಗೆಳೆಯನಿಗೆ ಮಾರಾಟ ಮಾಡಿ ಒಂದು ವರ್ಷವಾಗಿದೆ. ಜೆಪಿ ನಗರದಲ್ಲಿ ಒಂದು ಸ್ಟುಡಿಯೋ ಇದೆ. ಅದರ ಪಕ್ಕದಲ್ಲಿಯೇ ಪಾರ್ಕ್ ಮಾಡಿದ್ದಾರೆ. ಆದರೆ ನಾನು ಅಲ್ಲಿಗೆ ಹೋಗಿಲ್ಲ. ಪಾರ್ಕಿಂಗ್ ಬೋರ್ಡ್ ನ್ನು ಸರ್ಕಾರವರಾಗಲಿ ಅಥವಾ ಪೊಲೀಸರು ಹಾಕಿಲ್ಲ. ಅಲ್ಲಿನ ನಿವಾಸಿಗಳೇ ಹಾಕಿದ್ದಾರೆ. ಅಲ್ಲಿ ಕಾರ್ ಪಾರ್ಕಿಂಗ್ ಮಾಡುವುದು ತಪ್ಪು. ಆದರೆ ನಾನು ಕಾರ್ ಪಾರ್ಕ್ ಮಾಡಿಲ್ಲ. ತಪ್ಪು ನನ್ನದಲ್ಲ ಎಂದು ಹೇಳಿದರು.

ಜೆಪಿ ನಗರ ರೆಸಿಡೆನ್ಸಿ ಏರಿಯಾ ಆಗಿದ್ದು, ಅಲ್ಲಿ ವಾಹನಗಳು ಹೆಚ್ಚಾಗಿ ಓಡಾಡುವುದಿಲ್ಲ. ಆದ್ದರಿಂದ ಅಲ್ಲಿ ಅಪಘಾತವಾಗುವುದಿಲ್ಲ. ಕಾರ್ ನನ್ನ ಹೆಸರಿನಲ್ಲಿದೆ. ಆದರೆ ನಾನು ಪಾರ್ಕ್ ಮಾಡಿಲ್ಲ. ಈಗಾಗಲೇ ನಾನು ಎಲ್ಲ ದಾಖಲಾತಿಗೆ ಸಹಿ ಮಾಡಿದ್ದೇನೆ. ಕಾರಿನ ಟ್ರಾನ್ಸಫರ್ ಕೆಲಸ ಕಾರ್ಯಗಳು ನಡೆಯುತ್ತಿವೆ. ನಾನಾಗಲಿ, ನನ್ನ ಡ್ರೈವರ್ ಆಗಲಿ ಅಲ್ಲಿ ಕಾರ್ ಪಾರ್ಕ್ ಮಾಡಿಲ್ಲ. ಆದ್ದರಿಂದ ಇದು ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು.

ಈ ಬಗ್ಗೆ ಪೋಸ್ಟರ್ ಗಳನ್ನು ನೋಡಿದ ನಂತರ ನಾನು ನನ್ನ ಸ್ನೇಹಿತನಿಗೆ ಹೇಳಿದ್ದೇನೆ. ಆದಷ್ಟು ಬೇಗ ಟ್ರಾನ್ಸಫರ್ ಕೆಲಸಗಳು ಮುಗಿಯುತ್ತದೆ. ಈ ಬಗ್ಗೆ ನನಗೆ ಯಾವುದೇ ಟ್ರಾಫಿಕ್ ಪೊಲೀಸರಿಂದ ಕರೆ ಬಂದಿಲ್ಲ. ಮೊದಲು ಈ ಬಗ್ಗೆ ದೂರು ನೀಡಿದವರ ಬಳಿ ಮಾತನಾಡುತ್ತೇನೆ. ಸದ್ಯಕ್ಕೆ ಕಾರ್ ನನ್ನದಲ್ಲ. ನಾನು ಪಾರ್ಕ್ ಮಾಡಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.

ದೂರು ನೀಡಿದ್ದು ಯಾಕೆ?
ಜೆಪಿ ನಗರದ 6ನೇ ಹಂತದ 28ನೇ ಎ ಮುಖ್ಯರಸ್ತೆಯಲ್ಲಿ ಅಪಾರ್ಟ್ ಮೆಂಟ್ ಮುಂಭಾಗದ ನೋ ಪಾರ್ಕಿಂಗ್ ಝೋನ್ ನಲ್ಲಿ ಪದೇ ಪದೇ ಕಾರನ್ನು ಪಾರ್ಕ್ ಮಾಡಲಾಗುತ್ತದೆ ಎಂದು ಜೆಪಿ ನಗರದ ನಿವಾಸಿಯಾಗಿರುವ ಧನಂಜಯ್ ಪದ್ಮನಾಭಾಚಾರ್ ಆರೋಪಿಸಿ ಸಂಚಾರ ಪೊಲೀಸರಿಗೆ ದೂರು ನೀಡಿದ್ದರು.

ಜೆಪಿ ನಗರ ನಿವಾಸಿಗಳು ಕಾರು ಯಾರದು ಎಂದು ತಿಳಿದುಕೊಳ್ಳಲು ಅವರೇ ಕಾರ್ ನಂಬರ್ ಬರೆದುಕೊಂಡು ಆರ್ ಟಿಓಗೆ ಹೋಗಿ ರೆಕಾರ್ಡ್ ನಲ್ಲಿ ಚೆಕ್ ಮಾಡಿಸಿದ್ದರು. ಅಲ್ಲಿ ರಕ್ಷಿತ್ ಶೆಟ್ಟಿ ಅವರದ್ದು ಎಂದು ತಿಳಿದು ಬಂದಿತ್ತು. ಬಳಿಕ ಸಂಚಾರದ ನೀತಿ, ನಿಯಮಗಳು ಕೇವಲ ಸಾಮಾನ್ಯ ಜನರಿಗೆ ಮಾತ್ರ ಇರುವುದೇ, ಸ್ಯಾಂಡಲ್ ವುಡ್ ಹೀರೋಗಳಿಗೆ ಬೇರೆ ನಿಯಮವಿದೆಯೇ ಎಂದು ಧನಂಜಯ್ ಅವರು ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದರು.

ಜವಾಬ್ಧಾರಿ ಯುತ ನಟರೇ ಈ ರೀತಿ ನಡೆದುಕೊಂಡರೆ ಹೇಗೆ ಅಂತಾ ಜನ ಸಾಮಾಜಿಕ ಜಾಲತಾಣದಲ್ಲಿ ನಟನನ್ನು ತರಾಟೆಗೆ ತೆಗೆದುಕೊಂಡಿದ್ದರು. ನೀವು ರಿಯಲ್ ಲೈಫ್ ನಲ್ಲಿ ಹೀರೋ ಆಗಬೇಕು ರೀಲ್ ಲೈಫ್ ನಲ್ಲಿ ಮಾತ್ರ ಅಲ್ಲ ಎಂದು ಟ್ವೀಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *