– ಇದು ಎಂಥವರೂ ಮೆಚ್ಚಿಕೊಳ್ಳುವ ಒಂದೊಳ್ಳೆ ಕೆಲಸ!
ಬೆಂಗಳೂರು: ಕಳೆದ ಸೀಸನ್ನಿನ ಬಿಗ್ ಬಾಸ್ ಶೋ ವಿನ್ನರ್ ಆಗಿದ್ದವರು ಪ್ರಥಮ್. ಹಾಗೆ ಗೆದ್ದುಕೊಂಡ ಐವತ್ತು ಲಕ್ಷ ರೂಪಾಯಿಗಳನ್ನು ಸಮಾಜಮುಖಿಯಾದ ಕೆಲಸ ಕಾರ್ಯಗಳಿಗೆ ಬಳಸೋದಾಗಿ ಪ್ರಥಮ್ ಹೇಳಿಕೊಂಡಿದ್ದರು. ಆ ನಂತರದಲ್ಲಿ ಹಂತ ಹಂತವಾಗಿ ತಮ್ಮ ಮಾತಿಗೆ ಬದ್ಧವಾಗಿ ಮನ್ನಡೆಯುತ್ತಾ ಬಂದಿದ್ದ ಪ್ರಥಮ್ ಅವರೀಗ ನಿಜಕ್ಕೂ ಸಾರ್ಥಕವೆಂಬಂಥಾ ಕೆಲಸವೊಂದನ್ನು ಮಾಡಿದ್ದಾರೆ. ಬಡತನದ ಬೇಗೆಯಿಂದಾಗಿ ವಿದ್ಯಾಭ್ಯಾಸವನ್ನು ದ್ವಿತೀಯ ಪಿಯುಸಿಗೇ ಮೊಟಕುಗೊಳಿಸಿಕೊಳ್ಳುವ ಸ್ಥಿತಿಯಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳಿಗೆ ಪ್ರಥಮ್ ಆರ್ಥಿಕ ಸಹಾಯ ಮಾಡಿದ್ದಾರೆ. ಆಕೆಯ ಓದಿನ ಬಾಬತ್ತನ್ನು ತಾವೇ ಭರಿಸುವ ವಾಗ್ದಾನ ನೀಡುವ ಮೂಲಕ ಎಲ್ಲರೂ ಮೆಚ್ಚುವಂಥಾ ಕೆಲಸ ಮಾಡಿದ್ದಾರೆ.

ಹೀಗೆ ಪ್ರಥಮ್ ಅವರ ಮಾನವೀಯ ಸಹಾಯದಿಂದಲೇ ಮುರುಟಿ ಹೋಗುವಂತಿದ್ದ ಕನಸು ಮತ್ತೆ ಚಿಗುರಿದ ಸಂಭ್ರಮದಲ್ಲಿರುವಾಕೆ ಪ್ರತಿಭಾವಂತ ವಿದ್ಯಾರ್ಥಿನಿ ಮೇಘ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹಲಗಾಪುರ ಗ್ರಾಮದ ಚಾಮರಾಜು ಮತ್ತು ರತ್ನಮ್ಮ ದಂಪತಿಯ ಪುತ್ರಿ ಮೇಘಾ, ದ್ವಿತೀಯ ಪಿಯುಸಿಯಲ್ಲಿ 91.5 ಪರ್ಸೆಂಟೇಜು ಅಂಕ ಗಳಿಸಿಕೊಂಡಿದ್ದಳು. ಇಲ್ಲಿನ ಬಂಡಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ 549 ಅಂಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದರೂ ಹೆತ್ತವರ ಆರ್ಥಿಕ ಸಂಕಷ್ಟವೇ ಮೇಘಾಳ ಓದಿಗೆ ಕಂಟಕವಾಗಿತ್ತು. ಇನ್ನೇನು ಪಿಯುಸಿಗೇ ತನ್ನ ವ್ಯಾಸಂಗ ಮೊಟಕುಗೊಳ್ಳುವ ಭಯ ಈ ವಿದ್ಯಾರ್ಥಿನಿಯನ್ನು ಆವರಿಸಿಕೊಂಡಿತ್ತು.

ಈ ವಿಚಾರವನ್ನು ಅದು ಹೇಗೋ ತಿಳಿದುಕೊಂಡ ಪ್ರಥಮ್ ಕಳೆದ ಭಾನುವಾರ ಮೇಘಾಳ ಮನೆಗೆ ತೆರಳಿದ್ದಾರೆ. ಹೆತ್ತವರಿಗೆ ಧೈರ್ಯ ತುಂಬಿ, ಮಗಳನ್ನು ಓದಿಸುವಂತೆ ಪ್ರೇರೇಪಿಸಿ ಆರಂಭಿಕವಾಗಿ ಹತ್ತು ಸಾವಿರದಷ್ಟು ಹಣ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮೇಘಾಳನ್ನು ಪೋಷಕರು ಯಾವ ಕಾಲೇಜಿಗೆ ಸೇರಿಸಿದರೂ ವಿದ್ಯಾಭ್ಯಾಸಕ್ಕೆ ನೆರವಾಗೋದಾಗಿಯೂ ಪ್ರಥಮ್ ವಾಗ್ದಾನ ನೀಡಿದ್ದಾರೆ. `ಮೇಘಾ ಕುಗ್ರಾಮದ ಹುಡುಗಿ. ಮನೆಯಲ್ಲಿ ಅಂಥಾ ಬಡತನವಿದ್ದರೂ ಇಷ್ಟೊಂದು ಅಂಕ ಗಳಿಸಿದ್ದೊಂದು ಸಾಧನೆ. ಈ ಹುಡುಗಿ ಬಡತನದ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿಕೊಳ್ಳೋ ಸ್ಥಿತಿ ತಲುಪಿರೋದನ್ನು ಕೇಳಿ ಬೇಸರವಾಯ್ತು. ಆದ್ದರಿಂದಲೇ ಸಹಾಯ ಮಾಡಿದ್ದೇನೆ. ಮುಂದೆಯೂ ಮೇಘಾ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆ. ನಾನು ಬಿಗ್ ಬಾಸ್ ಶೋನಲ್ಲಿ ಗೆದ್ದ ಹಣ ಇಂಥಾ ಒಳ್ಳೆ ಕೆಲಸ ಕಾರ್ಯಗಳಿಗೇ ವಿನಿಯೋಗವಾಗಬೇಕೆಂಬುದು ತಮ್ಮ ಮಹದಾಸೆ ಅಂತ ಪ್ರಥಮ್ ಹೇಳಿಕೊಂಡಿದ್ದಾರೆ.

ಈ ಹುಡುಗಿ ಮೇಘಾಳ ಹೆತ್ತವರ ಬಡತನ, ಮನೆ ಕಡೆಯ ಪರಿಸ್ಥಿತಿ ಮತ್ತು ಅದೆಲ್ಲದರಾಚೆಗೂ ಓದಿ ಆಕೆ ಪಡೆದುಕೊಂಡ ಅಂಕಗಳ ವಿವರ ಕೇಳಿದರೆ ಪ್ರಥಮ್ ಸಹಾಯ ಮಾಡಿದ್ದು ಎಂಥಾ ಸಾರ್ಥಕ ಕೆಲಸ ಎಂಬುದು ಯಾರಿಗಾದರೂ ಅರ್ಥವಾಗುತ್ತೆ. ಮೇಘಾಳ ತಂದೆ ಚಾಮರಾಜ ಮಡಿವಾಳ ಸಮುದಾಯದವರು. ಈ ಕುಲಕಸುಬನ್ನು ಮಾಡುತ್ತಾ, ಕೂಲಿನಾಲಿ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿರೋ ಅವರಿಗೆ ಮಡದಿ ರತ್ನಮ್ಮ ಕೂಡಾ ಸಹಾಯಕ್ಕೆ ನಿಂತಿದ್ದಾರೆ. ಈ ದಂಪತಿಗೆ ತಮ್ಮ ಮಗಳು ಮೇಘಾಳನ್ನ ಚೆಂದಗೆ ಓದಿಸಬೇಕೆಂಬ ಬಯಕೆ. ಅದಕ್ಕೆ ಸರಿಯಾಗಿಯೇ ಮೇಘಾ ಕೂಡಾ ಆರಂಭದಿಂದಲೂ ಬುದ್ಧಿವಂತೆ. ಚುರುಕು ಸ್ವಭಾವದ ಮೇಘಾ, ಓದಿನಲ್ಲಿ ಯಾವತ್ತೂ ಹಿಂದೆ ಬಿದ್ದವಳಲ್ಲ.

ಹೈಸ್ಕೂಲು ದಾಟುತ್ತಿದ್ದಂತೆಯೇ ತಾನೂ ಸಣ್ಣಪುಟ್ಟ ಕೆಲಸ ಮಾಡುತ್ತಲೇ ಓದು ಮುಂದುವರೆಸಿದ್ದ ಮೇಘಾ ಹೈಸ್ಕೂಲು ದಾಟಿ, ಪಿಯುಸಿ ಪೂರೈಸಿದ್ದೇ ಒಂದು ಸಾಹಸ. ಆದರೆ ಹೇಗೋ ಹರಸಾಹಸ ಪಟ್ಟು ಮಗಳನ್ನು ಪಿಯುಸಿವರೆಗೂ ಓದಿಸಿದ್ದ ಚಾಮರಾಜ ಮತ್ತು ರತ್ನಮ್ಮ ದಂಪತಿಗೆ ಮಗಳ ಕಡೆಯಿಂದ ಸಿಹಿಯೇ ಸಿಕ್ಕಿತ್ತು. ಯಾಕೆಂದರೆ ಆಕೆ 549 ಅಂಕ ಗಳಿಸೋ ಮೂಲಕ ಇಡೀ ತಾಲೂಕಿನ ಗಮನ ಸೆಳೆದಿದ್ದಳು. ಆದರೆ ಮಗಳು ಇಷ್ಟು ಚೆಂದಗೆ ಓದುತ್ತಿದ್ದರೂ ಮುಂದೆ ಆಕೆಯನ್ನು ಓದಿಸಲಾಗದ ದುಃಸ್ಥಿತಿಗೆ ಪೋಷಕರು ತಲುಪಿಕೊಂಡಿದ್ದರು. ಇನ್ನೇನು ಮೇಘಾ ಪಾಲಿಗಿನ್ನು ಓದು ಮರೀಚಿಕೆ ಎಂಬಂಥಾ ನಿರ್ಧಾರವೂ ರೂಪುಗೊಂಡಾಗಿತ್ತು.

ಅಷ್ಟರಲ್ಲಿಯೇ ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿ ಅದು ಪ್ರಥಮ್ ಅವರನ್ನೂ ತಲುಪಿಕೊಂಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪ್ರಥಮ್ ಮನೆಗೇ ತೆರಳಿ ಮೇಘಾಳನ್ನು ಮತ್ತೆ ವ್ಯಾಸಂಗದಲ್ಲಿ ಮುಂದುವರೆಯುವಂತೆ ಮಾಡಿದ್ದಾರೆ. ಈ ಮೂಲಕ ಕೂಲಿ ನಾಲಿಯಲ್ಲಿ ಕಳೆದು ಹೋಗುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳ ಬದುಕು ಬೆಳಗಿದ್ದಾರೆ. ಇದು ನಿಜಕ್ಕೂ ಎಲ್ಲರೂ ಮೆಚ್ಚಿಕೊಳ್ಳುವಂಥಾ, ಎಲ್ಲರಿಗೂ ಮಾದರಿಯಾದ ಕೆಲಸ.

Leave a Reply