ನೆನಪಿರಲಿ ಪ್ರೇಮ್ 25ನೇ ಸಿನಿಮಾ ಅನೌನ್ಸ್ ಆಯ್ತು

ಬೆಂಗಳೂರು: ನೆನಪಿರಲಿ ಸಿನಿಮಾದ ಮೂಲಕ ಭರವಸೆಯ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಲವ್ಲಿ ಸ್ಟಾರ್ ಪ್ರೇಮ್ 25ನೇ ಸಿನಿಮಾದ ಖುಷಿಯಲ್ಲಿದ್ದಾರೆ. ಪ್ರತಿಯೊಬ್ಬ ಸಿನಿ ತಾರೆಯೂ ತಮ್ಮ 25ನೇ ಸಿನಿಮಾ ವಿಶೇಷವಾಗಿರಬೇಕೆಂಬ ಕನಸಿಟ್ಟುಕೊಂಡಿರುತ್ತಾರೆ. ಅದರಂತೆ ಪ್ರೇಮ್ ಕೂಡ ತನ್ನ 25ನೇ ಸಿನಿಮಾ ವಿಭಿನ್ನವಾಗಿರಬೇಕೆಂದು ವಿನೂತನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಸ್ಪೆಷಲ್ ಆಗಿ ಕಾಣಿಸಿಕೊಳ್ಳಬೇಕೆಂಬ ಹಂಬಲದಲ್ಲಿದ್ದಾರೆ. ಹೌದು ಪ್ರೇಮ್ ಅಭಿನಯದ 25ನೇ ಚಿತ್ರಕ್ಕೆ ಪ್ರೇಮಂ ಪೂಜ್ಯಂ ಎಂದು ಟೈಟಲ್ ಫಿಕ್ಸ್ ಆಗಿದ್ದು, ಟೈಟಲ್ ಜತೆಗೆ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಅಂದಹಾಗೆ ಈ ಚಿತ್ರಕ್ಕೆ ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದು, ರಕ್ಷಿತಾ ಕೆಡಂಬಾಡಿ ಹಾಗೂ ಡಾ. ರಾಜ್ ಕುಮಾರ್ ಜಾನಕಿ ರಾಮನ್ ಬಂಡವಾಳ ಹೂಡುತ್ತಿದ್ದಾರೆ.

ಲೈಫ್ ಜೊತೆ ಒಂದು ಸೆಲ್ಫೀ ಚಿತ್ರದ ನಂತರ ಪ್ರೇಮ್ ಯಾವುದೇ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಖಾಸಗಿ ಕಾರ್ಯಕ್ರಮಗಳು ಹಾಗೂ ಸುಮಲತಾ ಪರ ಪ್ರಚಾರದ ಸಮಯದಲ್ಲಿ ಬಿಟ್ಟರೆ ಇನ್ನೆಲ್ಲೂ ಪ್ರೇಮ್ ಕಾಣಿಸಿಕೊಂಡಿರಲಿಲ್ಲ. ಒಂದು ವರ್ಷದ ಬಳಿಕ ಹೊಸ ಸಿನಿಮಾ ಪ್ರೇಮಂ ಪೂಜ್ಯಂ ಅನೌನ್ಸ್ ಆಗಿದ್ದು, ಚಿತ್ರದಲ್ಲಿ ಪ್ರೇಮ್ ಮತ್ತಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿರುವ ಚಿತ್ರ ತಂಡ ಮತ್ತಿನ್ನಾವ ವಿಚಾರವನ್ನೂ ಬಿಟ್ಟುಕೊಟ್ಟಿಲ್ಲ. ಲೋಕಸಭಾ ಚುನಾವಣಾ ಪ್ರಚಾರದ ನಂತರ ಪ್ರೇಮ್ ಪ್ರೇಮಂ ಪೂಜ್ಯಂ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

Comments

Leave a Reply

Your email address will not be published. Required fields are marked *