ಮುಂಬೈ: 90ರ ದಶಕದ ಬಾಲಿವುಡ್ ಖಳನಟ ಮಹೇಶ್ ಆನಂದ್ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಹೇಶ್ ಆನಂದ್ 80 ಹಾಗೂ 90ರ ದಶಕದಲ್ಲಿ ಹಿಂದಿ ಚಿತ್ರಗಳಲ್ಲಿ ಖಳನಟರಾಗಿ ಅಭಿನಯಿಸಿದ್ದಾರೆ. ಮಹೇಶ್ ಅವರ ಸಾವಿನ ವಿಷಯ ಅಧಿಕೃತವಾಗಿ ತಿಳಿದು ಬಂದಿಲ್ಲ. ಸದ್ಯ ಅವರ ಮೃತದೇಹವನ್ನು ಕೋಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಂತರ ಇದು ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎಂಬುದು ತಿಳಿದು ಬರಲಿದೆ.

ಮಹೇಶ್ ಆನಂದ್ ಮುಂಬೈನ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಅವರ ಪತ್ನಿ ಮಾಸ್ಕೋದಲ್ಲಿ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ ಮಹೇಶ್ ಆರ್ಥಿಕವಾಗಿ ಕಷ್ಟಪಡುತ್ತಿದ್ದರು ಎಂದು ಹೇಳಲಾಗಿದೆ. ಸಂದರ್ಶನವೊಂದರಲ್ಲಿ ಮಹೇಶ್ ಅವರು, “ನನಗೆ 18 ವರ್ಷದಿಂದ ಯಾವುದೇ ಸಿನಿಮಾ ಆಫರ್ ಗಳು ಬರಲಿಲ್ಲ. ಕೆಲವು ಬಾರಿ ನಾನು ಊಟಕ್ಕಾಗಿ ವ್ರೆಸ್ಲಿಂಗ್ ಮ್ಯಾಚ್ ಆಡುತ್ತಿದೆ” ಎಂದು ಹೇಳಿಕೊಂಡಿದ್ದರು.

ಮಹೇಶ್ ಕೊನೆಯದಾಗಿ ನಟ ಗೋವಿಂದ ಅವರ ‘ರಂಗೀಲಾ ರಾಜಾ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಕಳೆದ ತಿಂಗಳು ಜನವರಿಯಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾ ಬಿಡುಗಡೆ ಆದ ನಂತರ ಮಹೇಶ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ, “18 ವರ್ಷಗಳ ನಂತರ ನನ್ನ ರಂಗೀಲಾ ರಾಜಾ ಸಿನಿಮಾ ಬಿಡುಗಡೆ ಆಗಿದೆ. ನಾನು ತುಂಬಾ ಖುಷಿ ಆಗಿದ್ದೇನೆ. ನಾನು ಆ ಸಿನಿಮಾದ ಕೊನೆಯಲ್ಲಿ ಕೇವಲ 6 ನಿಮಿಷ ನಟಿಸಿದ್ದೇನೆ. ನೀವು ನನ್ನನ್ನು ಮತ್ತೆ ಸ್ವಾಗತಿಸುತ್ತೀರಿ ಎಂದುಕೊಂಡಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು.

ಮಹೇಶ್ ಆನಂದ್ ಅವರು ಈ ಹಿಂದೆ ಕುರುಕ್ಷೇತ್ರ, ಸ್ವರ್ಗ್, ಕೂಲಿ ನಂ. 1, ವಿಜೇತ್, ಶೆಹೆನ್‍ಶಾ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಹೇಶ್ ಬಾಲಿವುಡ್ ಹಿರಿಯ ಕಲಾವಿದರಾದ ಧರ್ಮೆಂದ್ರ, ಸನ್ನಿ ಡಿಯೋಲ್, ಸಂಜಯ್ ದತ್, ಗೋವಿಂದ ಹಾಗೂ ಅಮಿತಾಬ್ ಬಚ್ವನ್ ಸೇರಿದಂತೆ ಹಲವು ಹಿಂದಿ ಸೂಪರ್ ಸ್ಟಾರ್‍ಗಳ ಜೊತೆ ನಟಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply