ಧನ್ಯವಾದ ತಿಳಿಸಿದ ನಟ ದರ್ಶನ್

ಹುಟ್ಟು ಹಬ್ಬ ಮತ್ತು ಬೆಳ್ಳಿ ಪರ್ವದ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ದರ್ಶನ್ (Darshan). ಫೆಬ್ರವರಿ 16 ರಂದು ದರ್ಶನ್ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು ಅವರ ಅಭಿಮಾನಿಗಳು ಫೆ.17ರಂದು ಶ್ರೀರಂಗಪಟ್ಟಣದಲ್ಲಿ ಸಾವಿರಾರು ಜನರ ಮಧ್ಯೆ ಅವರ ಬೆಳ್ಳಿಪರ್ವ ಕಾರ್ಯಕ್ರಮ ಆಯೋಜನೆಯಾಗಿತ್ತು.

ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ದರ್ಶನ್, ನನ್ನ ಪ್ರೀತಿಯ ಕೋರಿಕೆಗೆ ಬೆಲೆಕೊಟ್ಟು ಶಾಂತ ರೀತಿಯಲ್ಲಿ ಹುಟ್ಟುಹಬ್ಬದ ಆಚರಣೆಗೆ ಸಹಕರಿಸಿದ ಅಭಿಮಾನಿ ವರ್ಗಕ್ಕೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು. ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳು ತಿಳಿಸಿದ ಪ್ರಿಯ ಬಂಧು-ಮಿತ್ರರು, ಚಿತ್ರರಂಗದ ಸ್ನೇಹಿತರು, ಎಲ್ಲಾ ಮೀಡಿಯಾ ಮಿತ್ರರು, ರಾಜಕೀಯ ಗಣ್ಯರು, ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಅನಂತ ಅನಂತ ವಂದನೆಗಳು. ಹುಟ್ಟುಹಬ್ಬದ ಪ್ರಯುಕ್ತ ಅನೇಕ ಅನಾಥಾಶ್ರಮ ಹಾಗೂ ವೃದ್ದಾಶ್ರಮಗಳಲ್ಲಿ ತಮ್ಮ ಕೈಲಾದ ಸೇವೆ ಮಾಡಿದ ಅಭಿಮಾನಿಗಳಿಗೆ ನನ್ನ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಈ ನಿಮ್ಮ ಪ್ರೀತಿ-ಅಭಿಮಾನಕ್ಕೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ. ಧನ್ಯೋಸ್ಮಿ ಕರ್ನಾಟಕ ಎಂದೂ ಅವರು ಬರೆದುಕೊಂಡಿದ್ದಾರೆ. ಹುಟ್ಟು ಹಬ್ಬದ ದಿನದಂದು ಒಂದಲ್ಲ ಒಂದು ರೀತಿಯಲ್ಲಿ ವಿವಾದಗಳು ಏಳುತ್ತಿದ್ದವು. ಸಣ್ಣಪುಟ್ಟ ತೊಂದರೆ ಕೂಡ ಆಗುತ್ತಿತ್ತು. ಆದರೆ, ಈ ಬಾರಿ ಅತ್ಯಂತ ಅಚ್ಚುಕಟ್ಟಾಗಿ ಎರಡೂ ಕಾರ್ಯಕ್ರಮಗಳು ನಡೆದಿವೆ.

ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜಕಾರಣಿಗಳು, ಅಭಿಮಾನಿಗಳು ಹಾಗೂ ಸಿನಿಮಾ ರಂಗದ ಗಣ್ಯರು ಭಾಗಿಯಾಗಿ, ದರ್ಶನ್ ಅವರಿಗೆ ಅಭಿನಂದಿಸಿದ್ದರು.