ಅಭಿಮಾನಿಗಳನ್ನು ಸಮಾಧಾನಪಡಿಸಲು ರೋಡಿಗಿಳಿದ ದರ್ಶನ್‌ ಪುತ್ರ

– ಜನರ ಅಭಿಮಾನಕ್ಕೆ ಕೈಮುಗಿದ ವಿನೀಶ್‌
– ಹುಟ್ಟುಹಬ್ಬದ ಸಂಭ್ರಮದಲ್ಲಿ ದರ್ಶನ್‌ ಪುತ್ರ

ಬೆಂಗಳೂರು: ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ದರ್ಶನ್‌ ನೇರವಾಗಿ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮನೆಗೆ ಆಗಮಿಸಿದರು. ಈ ವೇಳೆ ನಿವಾಸದ ಬಳಿ ನೆರೆದಿದ್ದ ಅಭಿಮಾನಿಗಳನ್ನು ದರ್ಶನ್‌ ಪುತ್ರ ಭೇಟಿಯಾದರು.

ತಡರಾತ್ರಿಯಾದರೂ ದರ್ಶನ್‌ ನೋಡಲು ವಿಜಯಲಕ್ಷ್ಮಿ ಮನೆ ಬಳಿ ಅಭಿಮಾನಿಗಳು ನೆರೆದಿದ್ದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ‘ಡಿ ಬಾಸ್‌.. ಡಿ ಬಾಸ್‌..’ ಎಂದು ಜೈಕಾರ ಕೂಗಿದರು. ಈ ವೇಳೆ ಅಭಿಮಾನಿಗಳನ್ನು ದರ್ಶನ್‌ ಪುತ್ರ ವಿನೀಶ್‌ ಸಮಾಧಾನ ಪಡಿಸಿದರು.

ನಿವಾಸದಿಂದ ಆಚೆ ಬಂದು ದರ್ಶನ್ ಪುತ್ರ ವಿನೀಶ್ ಮುಖ್ಯರಸ್ತೆ ತನಕ ನಡೆದುಕೊಂಡು ಬಂದು ಅಭಿಮಾನಿಗಳತ್ತ ಕೈಬೀಸಿದರು. ನಂತರ ಫ್ಯಾನ್ಸ್‌ ಅಭಿಮಾನಕ್ಕೆ ನಮಸ್ತೆ ಎಂದು ಸನ್ನೆ ಮಾಡಿದರು. ರಸ್ತೆ ಮಧ್ಯೆದಲ್ಲೇ ನಡೆದುಕೊಂಡು ಬಂದು ಅಭಿಮಾನಿಗಳನ್ನು ಸಮಾಧಾನಪಡಿಸಿದರು.

ಇಂದು (ಅ.31) ದರ್ಶನ್‌ ಪುತ್ರ ವಿನೀಶ್‌ಗೆ ಜನ್ಮದಿನದ ಸಂಭ್ರಮ. ಪುತ್ರನ ಹುಟ್ಟುಹಬ್ಬದ ದಿನವೇ ದರ್ಶನ್‌ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದಾರೆ. ಇಂದು ನಿವಾಸದಲ್ಲಿ ಪುತ್ರನ ಬರ್ತ್‌ಡೇ ಸಂಭ್ರಮದಲ್ಲಿ ಪಾಲ್ಗೊಂಡು ನಂತರ ದರ್ಶನ್‌ ಆಸ್ಪತ್ರೆಗೆ ಶಿಫ್ಟ್‌ ಆಗಲಿದ್ದಾರೆಂದು ತಿಳಿದುಬಂದಿದೆ.