ಆಶ್ರಮದ ಮಕ್ಕಳು, ವೃದ್ಧರ ಸಮ್ಮುಖದಲ್ಲಿ ಪ್ರೇಯಸಿಯ ಜೊತೆ ಚೇತನ್ ಮದ್ವೆ

ಬೆಂಗಳೂರು: ನಟ ಚೇತನ್ ಅಸ್ಸಾಂ ಮೂಲದ ಯುವತಿಯನ್ನು ಪ್ರೀತಿಸುತ್ತಿರುವ ವಿಚಾರ ಬಹುತೇಕರಿಗೆ ತಿಳಿದಿತ್ತು. ಇದೀಗ ತಮ್ಮ ಪ್ರಿಯತಮೆಯ ಜೊತೆ ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಚೇತನ ಫೆಬ್ರವರಿ ತಿಂಗಳಲ್ಲಿ ಹಸೆಮಣೆ ಏರುತ್ತಿದ್ದಾರೆ. ಫೆಬ್ರವರಿ 2 ಭಾನುವಾರ ಸಂಜೆ ತಮ್ಮ ಗೆಳತಿ ಮೇಘಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಚೇತನ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದೆ. ಎರಡು ವರ್ಷಗಳಿಂದ ಅಸ್ಸಾಂ ಮೂಲದ ಯುವತಿ ಮೇಘಾರನ್ನು ಚೇತನ್ ಪ್ರೀತಿಸುತ್ತಿದ್ದರು. ನಂತರ ಇವರಿಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿಕೊಂಡಿದ್ದಾರೆ. ಆಗ ಎರಡು ಮನೆಯವರು ಕೂಡ ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ.

ನಟ ಚೇತನ್ ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಪ್ರೇಯಸಿ ಮೇಘಾ ಕೂಡ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಅದರಂತೆಯೇ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಅಷ್ಟೇ ಅಲ್ಲದೇ ಆಡಂಬರವಿಲ್ಲದ ಈ ವಿವಾಹದಲ್ಲಿ, ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ. ಈಗಾಗಲೇ ನಟ ಚೇತನ್ ಮದುವೆ ತಯಾರಿಯಲ್ಲಿದ್ದು, ಪುನೀತ್ ರಾಜ್‍ಕುಮಾರ್ ಅವರನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.

ನಟ ಚೇತನ್ ‘ಆ ದಿನಗಳು’, ‘ಬಿರುಗಾಳಿ’, ‘ಮೈನಾ’, ‘ಅತಿರಥ’ ಮತ್ತು ‘ದಶಮುಖ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Comments

Leave a Reply

Your email address will not be published. Required fields are marked *