ಚೆನ್ನೈ ಪ್ರವಾಹ: ಆಮೀರ್‌, ವಿಷ್ಣುರನ್ನ ರಕ್ಷಿಸಿದ ಅಗ್ನಿಶಾಮಕ ದಳ

ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತದಿಂದ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ಕಾಲಿವುಡ್ ಹೀರೋ ವಿಷ್ಣು ವಿಶಾಲ್ ಮನೆಯಿರುವ ಪ್ರದೇಶ ಜಲಾವೃತ್ತಗೊಂಡಿದೆ. ಈ ಪರಿಣಾಮ, ಮನೆಯಿಂದ ಯಾರೂ ಹೊರಬರಲಾರದ ಸ್ಥಿತಿಯಲ್ಲಿದ್ದಾರೆ. ಇದೇ ವೇಳೆ, ಬಾಲಿವುಡ್ ನಟ ಆಮೀರ್ ಖಾನ್ ಅವರು ನಟ ವಿಷ್ಣು (Vishnu Vishal) ಮನೆಯಲ್ಲೇ ಲಾಕ್ ಆಗಿದ್ದಾರೆ.

ಚೆನ್ನೈನ ಕರಪಾಕ್ಕಂ ಪ್ರದೇಶದಲ್ಲಿರುವ ತಮಿಳು ನಟ ವಿಷ್ಣು ವಿಶಾಲ್ ಮನೆಗೆ ಆಮೀರ್ ಖಾನ್ ಭೇಟಿ ನೀಡಿದ್ದರು. ಪ್ರವಾಹ ಪರಿಸ್ಥಿತಿಯಿಂದಾಗಿ ವಿಷ್ಣು ವಿಶಾಲ್ ಅವರ ನಿವಾಸದಲ್ಲೇ ಆಮೀರ್ ಖಾನ್ ಸಿಲುಕಿದ್ದರು. ಈ ಸಂದರ್ಭದಲ್ಲಿ ನೀರಿನ ಮಟ್ಟ ತೀವ್ರವಾಗಿ ಏರುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೆಟ್‌ವರ್ಕ್, ವೈಫೈ ಯಾವುದೂ ಇಲ್ಲವಾಗಿದೆ. ಇದೇ ಸಮಯದಲ್ಲಿ ವಿಷ್ಣು ವಿಶಾಲ್ ಮನೆಯೊಳಗೆ ನೀರು ನುಗ್ಗಿದ್ರಿಂದ ಸಹಾಯಕ್ಕಾಗಿ ನಟ ವಿಷ್ಣು ವಿಶಾಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮೂಲಕ ಮನವಿ ಮಾಡಿದ್ದರು.

ಕೂಡಲೆ ಅಗ್ನಿಶಾಮಕ ದಳ ನಟ ವಿಷ್ಣು ವಿಶಾಲ್ ಮತ್ತು ಆಮೀರ್ ಖಾನ್ (Aamir Khan) ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದಾರೆ. ಮಿಚಾಂಗ್ ಚಂಡಮಾರುತದಿಂದ ನನ್ನ ಮನೆಯೊಳಗೆ ನೀರು ನುಗ್ಗಿದೆ ಅವಾಂತರ ಆಗಿದೆ. ಕರಪಾಕ್ಕಂನಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗುತ್ತಿದೆ. ಸಹಾಯಕ್ಕಾಗಿ ಕರೆ ಮಾಡಿದ್ದೇನೆ. ವಿದ್ಯುತ್ ಸಂಪರ್ಕ ಇಲ್ಲ. ವೈಪೈ, ಫೋನ್ ಸಿಗ್ನಲ್ ಇಲ್ಲ. ಇಲ್ಲಿರುವವರ ಸಹಾಯಕ್ಕೆ ಯಾರಾದರೂ ಧಾವಿಸಲಿ ಎಂದು ಬಯಸುತ್ತೇನೆ ಎಂದು ವಿಷ್ಣು ವಿಶಾಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಈ ವಿಷಯ ಅರಿತ, ಅಗ್ನಿಶಾಮಕ ದಳ ವಿಷ್ಣು ಮನೆಗೆ ಧಾವಿಸಿ, ನಟ ವಿಷ್ಣು ಮತ್ತು ಆಮೀರ್ ಖಾನ್ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ತಂಡಕ್ಕೆ ವಿಷ್ಣು ಮತ್ತು ಆಮೀರ್‌ ಖಾನ್‌ ಧನ್ಯವಾದ ತಿಳಿಸಿದ್ದಾರೆ.