ಸಾರ್ವಜನಿಕ ರಸ್ತೆಯನ್ನು ನುಂಗಿ ಶಾಸಕ ಅನ್ಸಾರಿಯಿಂದ ಅದ್ಧೂರಿ ಮನೆ ನಿರ್ಮಾಣ!

ಕೊಪ್ಪಳ: ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿ ಸಾರ್ವಜನಿಕ ಸ್ಥಳವನ್ನು ಆಕ್ರಮವಾಗಿ ಬಳಸಿಕೊಂಡು ಅದ್ಧೂರಿಯಾಗಿ ಮನೆ ಕಟ್ಟಿಕೊಂಡು ಕಾನೂನು ನಿಯಮವನ್ನು ಗಾಳಿಗೆ ತೂರಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಇಡೀ ರಸ್ತೆಯನ್ನು ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿ ಸೈಯ್ಯದ್ ಅವರು ಎಸಿಬಿಯಲ್ಲಿ ದೂರು ನೀಡಿದ್ದಾರೆ.

ಆರೋಪ ಏನು?
ಗಂಗಾವತಿಯ ಕೊಪ್ಪಳ ರಸ್ತೆಯಲ್ಲಿ ಸರ್ವೆ ನಂ 29/1 ಜಾಗವನ್ನು ಲೇಔಟ್ ಮಾಡಿದ್ದಾರೆ. ಈ ಲೇಔಟ್‍ ನಲ್ಲಿ ಇಕ್ಬಾಲ್ ಅನ್ಸಾರಿ ಸೈಟ್ ಖರೀದಿ ಮಾಡಿದ್ದಾರೆ. ಈ ಪ್ಲಾಟ್‍ ಗಳ ನಡುವೆ ಬರುವ 30 ಅಡಿ ಅಗಲ 200 ಅಡಿ ಉದ್ದದ ಒಟ್ಟು 6900 ಚದರ ವಿಸ್ತೀರ್ಣದ ಬಿಟ್ಟ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ರಸ್ತೆಯಲ್ಲಿಯೇ ಅನ್ಸಾರಿ ಅದ್ಧೂರಿಯಾಗಿ ಮನೆ ನಿರ್ಮಿಸಿಕೊಂಡಿದ್ದಾರೆ.

ಅನ್ಸಾರಿ ವಿರುದ್ಧ ಹೋರಾಟ ಮಾಡುತ್ತಲೇ ಇರುವ ಸೈಯ್ಯದ್ ಅಲಿ ಹಲವಾರು ಬಾರಿ ಅತಿಕ್ರಮಣದ ಕುರಿತು ಸ್ಥಳೀಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರೂ ಅಧಿಕಾರಿಗಳು ಕ್ಯಾರೇ ಅಂದಿರಲಿಲ್ಲ. ಇದರಿಂದಾಗಿ ರೋಸಿಹೋದ ಸೈಯದ್ ಈಗ ಎಸಿಬಿಯಲ್ಲಿ ದೂರು ದಾಖಲಿಸಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಕಾಪಾಡಬೇಕಾದ ಶಾಸಕರೇ ಸಾರ್ವಜನಿಕರ ಆಸ್ತಿಯನ್ನು ನುಂಗಿ ಹಾಕಿದ್ದು ಎಷ್ಟು ಸರಿ ಎಂದು ಸೈಯ್ಯದ್ ಅಲಿ ಪ್ರಶ್ನಿಸಿದ್ದಾರೆ.

ಕೆಲ ದಿನಗಳ ಹಿಂದೆ ಗಂಗಾವತಿ ತಾಲೂಕಿನಾದ್ಯಂತ ಆಕ್ರಮ ಮದ್ಯ ಮಾರಾಟದ ವಿಚಾರದ ಬಗ್ಗೆ ಇಕ್ಬಾಲ್ ಅನ್ಸಾರಿ ಒಡೆತನದ ಬಾರ್ ಗಳ ವಿರುದ್ಧ ಸಾರ್ವಜನಿಕರು ಸಿಡಿದೆದ್ದರು. ಆದರೆ ಈಗ ಮತ್ತೆ ಸಾರ್ವಜನಿಕರ ಕಂಗೆಣ್ಣಿಗೆ ಶಾಸಕ ಅನ್ಸಾರಿ ಗುರಿಯಾಗಿದ್ದಾರೆ.

2013ರ ಚುನಾವಣೆಯಲ್ಲಿ ಗಂಗಾವತಿ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಅನ್ಸಾರಿ ಪಕ್ಷದ ವಿರುದ್ಧವೇ ಬಂಡಾಯ ಎದ್ದು ಕಳೆದ ವಾರ ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.

Comments

Leave a Reply

Your email address will not be published. Required fields are marked *