ಆ್ಯಸಿಡ್ ದಾಳಿ ಮಾಡಿ, ಅಮಾನುಷ ಕೃತ್ಯ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ಖಚಿತ: ಸುಧಾಕರ್

ಬೆಂಗಳೂರು: ಸುಂಕದಕಟ್ಟೆ ಬಳಿ ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ತ ಯುವತಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ 5 ಲಕ್ಷ ರೂ. ವೈಯಕ್ತಿಕ ಧನ ಸಹಾಯ ನೀಡಿದ್ದಾರೆ. ಅಮಾನುಷ ಕೃತ್ಯವೆಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.

ನಗರದ ಸೇಂಟ್ ಜಾನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಸಚಿವ ಭೇಟಿ ಮಾಡಿ, ಯುವತಿ ಹಾಗೂ ಕುಟುಂಬಸ್ಥರು ಮಾನಸಿಕ ಧೈರ್ಯ ತಂದುಕೊಳ್ಳಬೇಕು. ಸರ್ಕಾರ ಸಂತ್ರಸ್ತೆಯ ಜೊತೆ ಇರಲಿದೆ. ಎಲ್ಲಾ ರೀತಿಯ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ನೀಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಆ್ಯಸಿಡ್ ದಾಳಿ ಸಂತ್ರಸ್ತೆಯಿಂದ ಡೈಯಿಂಗ್ ಡಿಕ್ಲರೇಶನ್ ಪಡೆದ ಪೊಲೀಸರು

ಸಂತ್ರಸ್ತೆಯ ಜೊತೆ ಸರ್ಕಾರ, ಆರೋಗ್ಯ ಇಲಾಖೆ ಇರಲಿದೆ. ಯುವತಿಯ ಪೋಷಕರ ನೋವು ಸರ್ಕಾರಕ್ಕೆ ಅರ್ಥವಾಗುತ್ತದೆ. ಘಟನೆಯ ವಿಷಯ ತಿಳಿದು ಅತೀವ ದು:ಖವಾಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ. ಇಂತಹ ಮಹಾ ಕ್ರೌರ್ಯವನ್ನು ಒಬ್ಬ ವ್ಯಕ್ತಿ ಹೇಗೆ ಮಾಡುತ್ತಾನೆ ಎನ್ನುವುದು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ತಪ್ಪಿತಸ್ಥರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಿದೆ. ಫಾಸ್ಟ್ ಟ್ರ‍್ಯಾಕ್ ಕೋರ್ಟ್ ಮೂಲಕ ಈ ಪ್ರಕರಣದ ತ್ವರಿತ ವಿಚಾರಣೆ ನಡೆಸಿ, ಆದಷ್ಟು ಶೀಘ್ರದಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವ ಮೂಲಕ ಸಮಾಜ ಘಾತುಕರಿಗೆ ಎಚ್ಚರಿಕೆಯ ಸಂದೇಶ ನೀಡುವ ಅಗತ್ಯವಿದೆ ಎಂದು ಹೇಳಿದರು. ಇದನ್ನೂ ಓದಿ: ಹುಡುಗಿ ತಂಟೆಗೆ ಹೋಗಬೇಡ ಎಂದರೂ ಕೇಳಲಿಲ್ಲ ನಾಗೇಶ್ – ಪೊಲೀಸರ ಬಳಿ ಆರೋಪಿಯ ಅಣ್ಣ ಹೇಳಿಕೆ

ಸೇಂಟ್ ಜಾನ್ ಆಸ್ಪತ್ರೆಯ ಜೊತೆ ಬೆಂಗಳೂರು ಮೆಡಿಕಲ್ ಕಾಲೇಜು ಕೂಡ ಯುವತಿಯ ಶಸ್ತ್ರಚಿಕಿತ್ಸೆಗೆ ನೆರವು ನೀಡಲಿದೆ. ಸಂತ್ರಸ್ತ ಯುವತಿಗೆ ಶೇ.35 ರಷ್ಟು ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಯುವತಿಗೆ ಅಗತ್ಯವಿರುವ ಚರ್ಮ ಕಸಿ ಸೇರಿದಂತೆ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ನಾನು ವೈಯಕ್ತಿಕವಾಗಿ 5 ಲಕ್ಷ ರೂ. ಸಹಾಯಧನ ನೀಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ಯುವತಿಯ ಚಿಕಿತ್ಸೆ ಅಷ್ಟೇ ಅಲ್ಲದೇ ಆಕೆಯ ಮುಂದಿನ ಭವಿಷ್ಯಕ್ಕೆ ನೆರವಾಗಲು ಉದ್ಯೋಗ ಸೇರಿದಂತೆ ಎಲ್ಲಾ ರೀತಿಯ ಪುನರ್ವಸತಿ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ರೀತಿಯ ಅಮಾನವೀಯ ದುಷ್ಕೃತ್ಯಗಳು ಮರುಕಳಿಸದಂತೆ ವಿಕೃತ ಮನಸ್ಸುಗಳಿಗೆ ಕಡಿವಾಣ ಹಾಕಿ, ಯುವತಿಯರಿಗೆ ಸುರಕ್ಷಿತ ಸಮಾಜ ನಿರ್ಮಿಸುವತ್ತ ಇಡೀ ಸಮಾಜ ಕಾರ್ಯೋನ್ಮುಖವಾಗಬೇಕಿದೆ ಎಂದರು.

Comments

Leave a Reply

Your email address will not be published. Required fields are marked *