ಮೈಕ್ ಮುಂದೆ ಟವಲ್ ಹಿಡ್ಕೊಂಡು ಅಳಬೇಕೇ? ನಾವು ಹಂಗೆಲ್ಲ ಅಳಲ್ಲ: ಸಿಎಂಗೆ ಅಭಿಷೇಕ್ ಟಾಂಗ್

– ನಾನು ಮಂಡ್ಯದ ಅಳಿಯನಲ್ಲ, ಮಗ

ಮಂಡ್ಯ: ಮೈಕ್ ಮುಂದೆ ಟವಲ್ ಹಿಡಿದುಕೊಂಡು ಅಳಬೇಕೆ? ನಾವು ಹಂಗೆಲ್ಲ ಅಳಲ್ಲ. ನೀವು ಇರುವಾಗ ನಾವು ಯಾಕೆ ಅಳಬೇಕು ಎಂದು ಅಭಿಷೇಕ್ ಅಂಬರೀಶ್, ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಮಂಡ್ಯ ಲೋಕಸಭಾ ಅಭ್ಯರ್ಥಿ ಸುಮಲತಾ ಪರ ಪ್ರಚಾರದ ವೇಳೆ ಮಾತನಾಡಿದ ಅಭಿಷೇಕ್ ಅವರು, ನೇರವಾಗಿ ಗೆಲ್ಲಲು ಸಾಧ್ಯವಿಲ್ಲವೆಂದು ಮೈತ್ರಿ ನಾಯಕರಿಗೆ ಅರ್ಥವಾಗಿದೆ. ಹೀಗಾಗಿ ಸುಮಲತಾ ಹೆಸರಿನ ಮೂರು ಜನ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಿದ್ದಾರೆ ಎಂದು ವ್ಯಂಗ್ಯವಾಡಿ ನಕ್ಕರು.

ಸುಮಲತಾ ಅವರನ್ನು ಸೋಲಿಸಲು ಮೈತ್ರಿ ನಾಯಕರು ಏನೇನೋ ಗಿಮಿಕ್ ಮಾಡುತ್ತಿದ್ದಾರೆ. ನಾವು ದಡ್ಡರಲ್ಲ ಅಂತ ಏಪ್ರಿಲ್ 18ರಂದು ತೋರಿಸೋಣ. ಮತದಾರರಿಗೆ ಹಣ ಹಂಚುತ್ತಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಆದರೆ ನಾವು ಹಂಚುತ್ತಿರುವುದು ಹಣವಲ್ಲ, ಪ್ರೀತಿಯನ್ನ ಎಂದು ತಿರುಗೇಟು ಕೊಟ್ಟರು.

ಮೈತ್ರಿ ನಾಯಕರು ಬೇರೆ ಬೇರೆ ಪ್ಲಾನ್ ಮಾಡುತ್ತಿದ್ದಾರೆ. ಹೀಗಾಗಿ ವೋಟ್ ಹಾಕುವಾಗ ಹೆಸರು ಹಾಗೂ ಚಿಹ್ನೆಯನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಈ ಮೂಲಕ ಸ್ತ್ರೀ ಶಕ್ತಿ ಏನು ಅಂತ ಅವರಿಗೆ ನೀವು ತೋರಿಸಬೇಕು. ಮಂಡ್ಯ ಸ್ವಾಭಿಮಾನವನ್ನು ನೀವೇ ಕಾಪಾಡಬೇಕು. ಈ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮತದಾರರಿಗೆ ಅಭಿಷೇಕ್ ಮನವಿ ಮಾಡಿಕೊಂಡರು.

ನಾನು ಮಂಡ್ಯ ಕ್ಷೇತ್ರಕ್ಕೆ ನಿನ್ನೆ ಮೊನ್ನೆ ಬಂದಿಲ್ಲ. ಇಲ್ಲಿನ ಹುಡುಗಿಯನ್ನು ಮದುವೆಯಾಗಿ ಮಂಡ್ಯದವನೆಂದು ಕರೆಸಿಕೊಳ್ಳುವ ಅವಶ್ಯಕತೆ ನನಗಿಲ್ಲ. ನಾನು ಮಂಡ್ಯದ ಅಳಿಯನಲ್ಲ. ನಾನು ಮಂಡ್ಯದ ಮಗ ಎಂದು ಸ್ನೇಹಿತ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಮೈತ್ರಿ ಅಭ್ಯರ್ಥಿಗೆ ವೋಟ್ ಹಾಕಿದರೆ ಮಾಜಿ ಸಚಿವ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇದು ಯಾವ ಲೆಕ್ಕಾಚಾರವೆಂದು ನನಗೆ ಅರ್ಥವಾಗುತ್ತಿಲ್ಲ. ಅವರು ಹೇಳಿದರು ಅಂತ ನೀವು ನಂಬುತ್ತಿರಾ? ಅವರಿಗೆ ಇಷ್ಟ ಬಂದಂತೆ ಮಾತನಾಡಲಿ, ಹೇಳಿಕೆ ನೀಡಲಿ ನೀವು ಅದನ್ನು ನಂಬಬೇಡಿ. ನಮ್ಮ ತಾಯಿಗೆ ಆಶೀರ್ವಾದ ಮಾಡಿ, ನಮಗೊಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಕೇಳಿಕೊಂಡರು.

Comments

Leave a Reply

Your email address will not be published. Required fields are marked *