ಜೂನ್ 5ಕ್ಕೆ ಅಂಬಿ ಪುತ್ರನ ಮದುವೆ- ಅವಿವ ಜೊತೆ ಅಭಿ ಕಲ್ಯಾಣ

ಸ್ಯಾಂಡಲ್‌ವುಡ್‌ನಲ್ಲಿ ಅಂಬಿ ಪುತ್ರನ ಮದುವೆ ಸಂಭ್ರಮ ಮನೆ ಮಾಡಿದೆ. ಬಹುಕಾಲದ ಗೆಳತಿ ಜೊತೆ ಮದುವೆಯೆಂಬ ಮುದ್ರೆ ಒತ್ತಲು ಅಭಿಷೇಕ್ ಅಂಬರೀಶ್ (Abhishek Ambareesh) ರೆಡಿಯಾಗಿದ್ದಾರೆ. ಅವಿವ ಬಿಡಪ (Aviva Bidapa) ಜೊತೆ ಜೂನ್ 5ಕ್ಕೆ ಹಸೆಮಣೆ (Wedding) ಏರಲಿದ್ದಾರೆ.

ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ. ಈಗಾಗಲೇ ಹಳದಿ ಶಾಸ್ತ್ರ, ವರಪೂಜೆ, ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳನ್ನು ಅಂಬಿ ಮನೆಯಲ್ಲೇ ನೆರವೇರಿಸಲಾಗಿದೆ. ಭಾನುವಾರ (ಜೂನ್ 4) ಸಂಜೆ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.

ಈಗಾಗಲೇ ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರದಲ್ಲಿ ಹೊಸ ಜೋಡಿ ಮಿಂಚಿರುವ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವಿವ ಡಿಸೈನ್ ಮಾಡಿರುವ ಧರಿಸಿನಲ್ಲಿ ಅಭಿ-ಅವಿವ ಹೇಗೆ ಕಾಣುತ್ತಾರೆ? ಮದುವೆ ಲುಕ್ ಹೇಗಿರಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಒಟ್ನಲ್ಲಿ ಅಂಬಿ ಪುತ್ರನಿಗೆ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.