ತುಂಗಭದ್ರೆಗೆ ಅಂಬಾ ಆರತಿ – ಸಿಂಧನೂರಿನಲ್ಲಿ ಗ್ರಾಮೀಣ ದಸರಾ ವೈಭವ

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ (Sindhanur) ಈ ಬಾರಿ ವಿಶಿಷ್ಟವಾಗಿ ದಸರಾ ಹಬ್ಬವನ್ನ ಆಚರಿಸಲಾಗುತ್ತಿದೆ. ಗ್ರಾಮೀಣ ಭಾಗದ ವೈಶಿಷ್ಟ್ಯ ಮೆರೆಯಲು ದಸರಾ ಉತ್ಸವವನ್ನ ಗ್ರಾಮೀಣ ದಸರಾ ಉತ್ಸವವಾಗಿ ಹಳ್ಳಿಗಳಲ್ಲಿ ಆಚರಿಸಲಾಗುತ್ತಿದೆ. ತುಂಗಭದ್ರೆಗೆ ಆರತಿ (Tungabhadra Arati)ಬೆಳಗುವ ಮೂಲಕ ನವರಾತ್ರಿ ಸಂಭ್ರಮ ಆರಂಭವಾಗಿದೆ.

ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ದಸರಾ ಹಬ್ಬವನ್ನ ವೈಭವದಿಂದ ಆಚರಿಸಲಾಗುತ್ತಿದೆ. ಮೈಸೂರು ದಸರಾ ಮಾದರಿಯಲ್ಲಿ ನಾನಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಗನ್ನ ಆಯೋಜಿಸಲಾಗುತ್ತಿದೆ. ತಾಲೂಕಿನ ಮುಕ್ಕುಂದಾ ಗ್ರಾಮದ ತುಂಗಭದ್ರಾ ನದಿತಟದಲ್ಲಿ ಹಬ್ಬದ ಸಂಭ್ರಮ ಮೈನವಿರೇಳಿಸುವಂತೆ ನಡೆಯಿತು. ಇದನ್ನೂ ಓದಿ: ಸ್ವಾಮೀಜಿ ಬಯಕೆ ಈಡೇರಿಸುವಂತೆ ಮಹಿಳಾ ಅಧ್ಯಾಪಕರಿಂದ್ಲೇ ವಿದ್ಯಾರ್ಥಿನಿಯರ ಮೇಲೆ ಒತ್ತಡ – ತನಿಖೆ ತೀವ್ರ

ಮಳೆಯನ್ನು ಲೆಕ್ಕಿಸದೆ ತುಂಗಭದ್ರೆಗೆ ಅಂಬಾ ಆರತಿ ಮಾಡಲಾಯಿತು. ವಾರಣಾಸಿಯ ಅರ್ಚಕರ ತಂಡ ಅಂಬಾ ಆರತಿ ನೆರವೇರಿಸಿತು. ವಿಜಯನಗರದ ಅರಸರು ಮುಕ್ಕುಂದಾ ಗ್ರಾಮದಿಂದಲೇ ದಸರಾ ಆಚರಣೆ ಆರಂಭಿಸಿದರು ಎನ್ನುವ ಐತಿಹ್ಯ ಹಿನ್ನೆಲೆ ಅಂಬಾ ಆರತಿಯನ್ನ ವೈಭವದಿಂದ ನೆರವೇರಿಸಲಾಯಿತು.

ಸೋಮಲಾಪುರ ಗ್ರಾಮದ ಸಿದ್ಧಪರ್ವತ ಅಂಬಾಮಠದಲ್ಲಿ ಅಂಬಾದೇವಿ ನವರಾತ್ರಿ ಗ್ರಾಮೀಣ ಉತ್ಸವದ ಉದ್ಘಾಟನೆ ನೆರವೇರಿಸಲಾಯಿತು. ಅಂಬಾಮಠದ ಆವರಣವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಉತ್ಸವಕ್ಕೆ ಬಂದ ಗಣ್ಯರನ್ನ ಪೂರ್ಣ ಕುಂಭ-ಕಳಸ ಮತ್ತು ಆಕರ್ಷಕ ಕಲಾ ತಂಡಗಳಿಂದ ಅದ್ದೂರಿ ಸ್ವಾಗತ ಮಾಡಲಾಯಿತು. ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ಯಮಗಳ ಇಲಾಖೆ ಸಚಿವ ಶರಣಬಸಪ್ಪ ದರ್ಶನಾಪುರ ಉತ್ಸವಕ್ಕೆ ಚಾಲನೆ ನೀಡಿದರು.

ಸಿಂಧನೂರು ತಾಲೂಕಿನಲ್ಲಿ ಹೊಸ ಸಂಪ್ರದಾಯ ಆರಂಭಿಸುವ ಹಿನ್ನೆಲೆಯಲ್ಲಿ 11 ದಿನಗಳ ಕಾಲ ಸಿಂಧನೂರು ನಗರ ಮತ್ತು ಸುತ್ತಲಿನ ವಿವಿಧ ಹಳ್ಳಿಗಳಲ್ಲಿ ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಸ್ಥಳೀಯ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳ ಕಲಾವಿದರಿಂದ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.