ಎಎಪಿಯ ಮತ್ತೊಬ್ಬ ಶಾಸಕ ಬಿಜೆಪಿ ಸೇರ್ಪಡೆ

– ಕಮಲ ಹಿಡಿದ ಶಾಸಕ ದೇವಿಂದ್ರ ಕುಮಾರ್

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅನಿಲ್ ವಾಜಪೇಯಿ ಅವರ ಬೆನ್ನಲ್ಲೇ ಮತ್ತೋರ್ವ ಶಾಸಕ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಎಎಪಿ ಪಕ್ಷದ ರೆಬಲ್ ಶಾಸಕ ದೇವಿಂದ್ರ ಕುಮಾರ್ ಸೆಹ್ರಾವತ್ ಅವರು ಇಂದು ಕೇಂದ್ರ ಸಚಿವ ವಿಜಯ್ ಗೋಯಲ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.

ದೇವಿಂದ್ರ ಕುಮಾರ್ ಸೆಹ್ರಾವತ್ ಅವರು ನಿವೃತ್ತ ಕರ್ನಲ್ ಅಧಿಕಾರಿಯಾಗಿದ್ದು, 2015 ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜ್ವಾಸನ್ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಅವರನ್ನು 2016ರಲ್ಲಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

ದೆಹಲಿ ಗಾಂಧಿನಗರದ ಎಎಪಿ ಶಾಸಕ ಅನಿಲ್ ವಾಜಪೇಯಿ ಅವರು ನಾಲ್ಕು ದಿನಗಳ ಹಿಂದೆಯಷ್ಟೇ ಬಿಜೆಪಿ ಸೇರಿದ್ದರು. ಈ ಮೊದಲು ಹರಿಂದರ್ ಸಿಂಗ್ ಖಾಲ್ಸಾ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಮೂಲಕ ಕಳೆದ ಎರಡು ತಿಂಗಳಲ್ಲಿ ಎಎಪಿ ಒಟ್ಟು ಮೂರು ಜನ ಶಾಸಕರು ಪಕ್ಷ ತೊರೆದು ಬಿಜೆಪಿ ಮನೆ ಸೇರಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇತ್ತೀಚೆಗೆ ಟ್ವೀಟ್ ಮಾಡಿ, ಮೋದಿ ಜೀ, ರಾಜ್ಯಗಳಲ್ಲಿ ವಿರೋಧ ಪಕ್ಷದ ಶಾಸಕರನ್ನು ಖರೀದಿಸುವ ಮೂಲಕ ನೀವು ಸರ್ಕಾರವನ್ನು ಉರುಳಿಸುತ್ತೀರಾ? ಇದು ನಿಮ್ಮ ಪ್ರಜಾಪ್ರಭುತ್ವದ ವ್ಯಾಖ್ಯಾನವೇ? ಶಾಸಕರು ಖರೀದಿಸಲು ಇಷ್ಟೊಂದು ಹಣವನ್ನು ಎಲ್ಲಿಂದ ತರುತ್ತಿರುವಿರಿ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದರು.

ನೀವು ಈ ಹಿಂದೆ ಅನೇಕ ಬಾರಿ ನಮ್ಮ ಪಕ್ಷದ ಶಾಸಕರನ್ನು ಖರೀದಿಸಲು ಯತ್ನಿಸಿದ್ದೀರಿ. ಆದರೆ ನಮ್ಮ ಶಾಸಕರನ್ನು ಖರೀದಿಸುವುದು ಸುಲಭದ ಮಾತಲ್ಲ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *