ಆದಿತ್ಯ ಠಾಕ್ರೆ ಮುಂದಿನ ‘ಮಹಾ’ ಸಿಎಂ- ರಾರಾಜಿಸುತ್ತಿವೆ ಪೋಸ್ಟರ್

ಮುಂಬೈ: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬೆಂಬಲಿಗರು ಒತ್ತಾಯಿಸುದ್ದಾರೆ. ಅಷ್ಟೇ ಅಲ್ಲದೆ ಆದಿತ್ಯ ಠಾಕ್ರೆ ಮುಂದಿನ ಸಿಎಂ ಎಂಬ ಬ್ಯಾನರ್ ಗಳು ಮಹಾರಾಷ್ಟ್ರದಲ್ಲಿ ರಾರಾಜಿಸುತ್ತಿವೆ.

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಯು 161 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಈಗಾಗಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆದಿದ್ದು, 50:50 ಸೂತ್ರದ ಅಳವಡಿಕೆಗೆ ಶಿವಸೇನೆ ಬಿಗಿ ಪಟ್ಟು ಹಿಡಿದಿದೆ. ಈ ಮಧ್ಯೆ ಇದೇ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲವು ಸಾಧಿಸಿದ 29 ವರ್ಷದ ಆದಿತ್ಯ ಠಾಕ್ರೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಆದಿತ್ಯ ಠಾಕ್ರೆ ಸ್ಪರ್ಧಿಸಿದ್ದ ವರ್ಲಿ ಕ್ಷೇತ್ರದಲ್ಲಿ ಪೋಸ್ಟರ್ ಗಳು ರಾರಾಜಿಸುತ್ತಿದ್ದು, ಅದರಲ್ಲಿ ಶಿವಸೇನಾ ಸ್ಥಾಪಕ ಬಾಳ್ ಠಾಕ್ರೆ, ಅಧ್ಯಕ್ಷ ಉದ್ಧವ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ಫೋಟೋ ಹಾಕಲಾಗಿದೆ. ಜೊತೆಗೆ ಆದಿತ್ಯ ಠಾಕ್ರೆ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂದು ಬರೆಯಲಾಗಿದೆ.

ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನೆಯ ಎದುರಾಳಿ ಪಕ್ಷವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸುರೇಶ್ ಮನೆ ವಿರುದ್ಧ ಆದಿತ್ಯ ಠಾಕ್ರೆ 67 ಸಾವಿರ ಮತಗಳಿಂದ ಜಯಗಳಿಸಿದ್ದಾರೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಎನ್‍ಸಿಪಿ 54 ಹಾಗೂ ಕಾಂಗ್ರೆಸ್ 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಬಿಟ್ಟು ಆದಿತ್ಯ ಠಾಕ್ರೆಗೆ ಮುಖ್ಯಮಂತ್ರಿ ಸ್ಥಾನ ನೀಡುವುದು ಸೂಕ್ತವಲ್ಲ. ಆದಿತ್ಯ ಠಾಕ್ರೆಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡಬಹುದು. ಸದ್ಯ ಉದ್ಧವ್ ಠಾಕ್ರೆ ಅವರು ಸಿಎಂ ಸ್ಥಾನ ನಿರ್ವಹಿಸಬೇಕು ಎಂಬ ಮಾತುಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *